ದೇವೇಗೌಡರ ಮಾತಿಗೆ ಬೆಲೆ ಕೊಟ್ಟು ಒಪ್ಪಿಗೆ ಸೂಚಿಸಿದ ಜೆಡಿಎಸ್ ಕಾರ್ಯಕರ್ತರು

ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಮಾತಿಗೆ ಬೆಲೆ ಕೊಟ್ಟು ಪಕ್ಷದ ಹಿತದೃಷ್ಟಿಯಿಂದ ನವೆಂಬರ್ ೨೦ ರಂದು ಎಂ.ಡಿ.ರಮೇಶ್ ಗೌಡ ಅಭಿಮಾನಿ ಬಳಗದಿಂದ ನಡೆಯಬೇಕಿದ್ದ ಸ್ವಾಭಿಮಾನಿ ಸಮಾವೇಶವನ್ನು ರದ್ದುಪಡಿಸಲಾಗಿದೆ ಎಂದು ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ ತಿಳಿಸಿದ್ದಾರೆ.
ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನದಿಂದ ಸಮಾವೇಶ ನಡೆಸುವ ಸಂಬಂಧ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ನನ್ನ ನಡುವೆ ನಡೆಯುತ್ತಿರುವ ಶೀತಲ ಸಮರದ ಬಗ್ಗೆ ಕ್ಷೇತ್ರದ ಜನತೆಗೆ ತಿಳಿದಿದೆ. ಈ ವಿಚಾರವನ್ನು ವರಿಷ್ಠ ದೇವೇಗೌಡರಿಗೆ ತಿಳಿಸಿದ್ದು ಸದ್ಯದ ಪರಿಸ್ಥಿತಿಯಲ್ಲಿ ಸಮಾವೇಶ ನಡೆಸಬೇಡಿ. ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆಯ ಹಿತದೃಷ್ಟಿಯಿಂದ ಸಮಾವೇಶ ರದ್ದುಗೊಳಿಸುವುದು ಉತ್ತಮ, ಪಕ್ಷದವರಾದ ನಿಮ್ಮಗಳ ಭಿನ್ನಾಭಿಪ್ರಾಯದಿಂದ ಜನತೆಗೆ ಪಕ್ಷದ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗಿ ಪಕ್ಷಕ್ಕೆ ತೊಂದರೆಯಾಗುತ್ತದೆ ಆದ್ದರಿಂದ ಸದ್ಯದ ಮಟ್ಟಿಗೆ ಸಮಾವೇಶ ಬೇಡ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಪಕ್ಷದಿಂದ ಉಚ್ಚಾಟಿಸಿರುವ ವಿಚಾರವಾಗಿ ಜಿಲ್ಲಾಧ್ಯಕ್ಷ ಚನ್ನಿಗಪ್ಪ ಅವರೊಂದಿಗೆ ಚರ್ಚಿಸಿ ಉಚ್ಚಾಟನೆ ಆದೇಶ ಹಿಂಪಡೆಯುವಂತೆ ಸೂಚಿಸುತ್ತೇನೆ. ಪಕ್ಷಕ್ಕೆ ನಿಮ್ಮಂತಹವರ ಅಗತ್ಯವಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಸಂಘಟಿಸಿ ಎಂದು ದೇವೇಗೌಡರು ಹೇಳಿದ್ದಾರೆಂದರು.ವರಿಷ್ಠ ದೇವೇಗೌಡರ ಮಾತಿಗೆ ಬೆಲೆ ನೀಡಿ ಸಮಾವೇಶವನ್ನು ರದ್ದುಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತೊಂದು ದಿನಾಂಕ ನಿಗದಿಪಡಿಸಿ ಪಕ್ಷದ ವರಿಷ್ಠರನ್ನು ಕರೆಸಿ ಬೃಹತ್ ಸಮಾವೇಶವನ್ನು ನಡೆಸಲಾಗುವುದೆಂದರು.ಅಭಿಮಾನಿಗಳು ಬೇಸರಗೊಳ್ಳದೆ ಕ್ಷೇತ್ರದಲ್ಲಿ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು.
Comments