ಒಂದಲ್ಲ, ಎರಡಲ್ಲ ಮೂರೂ ಮದುವೆಯಾದ ಭೂಪ

ಇಬ್ಬರು ಪತ್ನಿಯರು ಮಕ್ಕಳಿದ್ದರೂ, 3 ನೇ ಮದುವೆಯಾಗಿದ್ದ ಭೂಪನನ್ನು ಮೊದಲ ಪತ್ನಿಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹಾಸನ ಜಿಲ್ಲೆಯ ಗೋರೂರಿನಲ್ಲಿ ನಡೆದಿದೆ. ಕೇಂದ್ರ ಸರ್ಕಾರಿ ನೌಕರನಾಗಿರುವ ವ್ಯಕ್ತಿ, 3 ಮದುವೆಯಾದ ಭೂಪ.
ಗೋರೂರಿನ ಯುವತಿಯನ್ನು ಮದುವೆಯಾಗಿ ಬೀಗರೂಟ ನಡೆಯುವ ಸಂದರ್ಭದಲ್ಲಿ ಮೊದಲ ಪತ್ನಿ ಹಾಗೂ ಆಕೆಯ ಸಂಬಂಧಿಕರು ಬಂದು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಚನ್ನಪಟ್ಟಣದಲ್ಲಿ ಮೊದಲ ಮದುವೆಯಾಗಿದ್ದ ರಾಜೇಶನಿಗೆ ಇಬ್ಬರು ಮಕ್ಕಳಿದ್ದು, ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ಕೋರ್ಟ್ ಮೆಟ್ಟಿಲೇರಿದ್ದಾರೆ. ಮೊದಲ ಪತ್ನಿಯಿಂದ ದೂರವಾದ ರಾಜೇಶ್ ನಂತರದಲ್ಲಿ ಅರಕಲಗೂಡು ತಾಲ್ಲೂಕಿನ ಯುವತಿಯನ್ನು ಮದುವೆಯಾಗಿದ್ದಾನೆ. 2 ನೇ ಪತ್ನಿಗೂ ದೈಹಿಕ, ಮಾನಸಿಕ ಹಿಂಸೆ ನೀಡಿ ದೂರ ಮಾಡಿದ್ದಾನೆ. ಮತ್ತೆ ಮೂರನೇ ಮದುವೆಯಾಗಿದ್ದ ಈತನನ್ನು ಪ್ರಶ್ನಿಸಲು ಹೋಗಿದ್ದ ಮೊದಲ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಮೊದಲ ಪತ್ನಿಯ ಸಂಬಂಧಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆಗೊಳಗಾದ ಮೊದಲ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
Comments