ಸಿಎಂ ಸಿದ್ದರಾಮಯ್ಯಗೆ ಎಚ್ ಡಿಕೆ ದೂರವಾಣಿ ಕರೆ ಮಾಡಿದ್ದೇಕೆ?
ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಕ್ಕಟ್ಟನ್ನು ಬಗೆಹರಿಸಿ ಕೆಎಂಪಿಇ ಕಾಯ್ದೆಯಡಿ ಬದಲಾವಣೆ ಮಾಡಿ ವೈದ್ಯರಿಗೆ ಮುಜುಗರವಾಗುವ ಅಂಶಗಳನ್ನು ಕೈಬಿಟ್ಟು ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.
ದೂರವಾಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಯ ವೈದ್ಯರ ಮುಂದೆ ಕೈಕಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ. ಕೆಎಂಪಿಇ ಕೆಲವು ನಿಯಮಗಳನ್ನು ಮಾರ್ಪಾಡು ಮಾಡಿ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿ ಮುಷ್ಕರವನ್ನು ಕೈಬಿಡುವಂತೆ ಮಾಡಿ. ಮೊದಲು ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಿ ಎಂದು ತಿಳಿಸಿದ್ದಾರೆ.
ಆರೋಗ್ಯ ಸಚಿವ ರಮೇಶ್ ಕುಮಾರ್ ಅವರೊಂದಿಗೂ ಚರ್ಚಿಸಿ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಿ. ಖಾಸಗಿ ಆಸ್ಪತ್ರೆಯ ವೈದ್ಯರ ಮುಷ್ಕರದಿಂದ ಜನರು ಸಾಯುತ್ತಿದ್ದಾರೆ. ಇಂತಹ ಸಮಸ್ಯೆ ಮತ್ತಷ್ಟು ಉಲ್ಬಣವಾಗುವುದು ಬೇಡ. ಸ್ಥಳೀಯ ಪ್ರಾಧಿಕಾರದ ಮುಂದೆ ಕೈಕಟ್ಟಿ ನಿಲ್ಲುವಂತಾಗುತ್ತದೆ. ಕಾಯ್ದೆಗಳು ಜನಸಾಮಾನ್ಯರಿಗೆ ಅನುಕೂಲವಾಗುವಂತಿರಲಿ.ಸಾವಿನ ಸರಣಿ ಮುಂದುವರೆಯುವ ಮುನ್ನ ಸಮಸ್ಯೆಯನ್ನು ಇತ್ಯರ್ಥಪಡಿಸಿ ಎಂದು ಅವರು ತಿಳಿಸಿದ್ದಾರೆ. ಕುಮಾರಸ್ವಾಮಿ ಅವರ ಸಲಹೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದು ಇಂದು ಮಧ್ಯಾಹ್ನ ಸಂಘಟನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿದ್ದಾರೆ.
Comments