ಪ್ರಜ್ವಲ್ ರೇವಣ್ಣ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು

ಪ್ರಜ್ವಲ್ ರೇವಣ್ಣ ಟಿಕೆಟ್ ನೀಡುವ ಕುರಿತು ಕೆಲವು ದಿನಗಳಿಂದ ಬಿಸಿ-ಬಿಸಿ ಚರ್ಚೆ ಏರ್ಪಟ್ಟಿದ್ದು, ಪ್ರಜ್ವಲ್ ಅವರು ನಿಖಿಲ್ ಅವರ ಸ್ನೇಹಿತ ಮಹಾಭಾರತ ಚಿತ್ರದ ನಿರ್ಮಾಪಕ ಮುನಿರತ್ನ ಅವರ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಹಾಗಾಗಿ ಅವರಿಬ್ಬರ ನಡುವೆ ಮನಸ್ತಾಪ ಇದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು. ಆದರೆ ಅದನ್ನು ಅಲ್ಲಗಳೆದಿರುವ ನಿಖಿಲ್ ಗೌಡ ಪ್ರಜ್ವಲ್ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಸ್ಪಷ್ಟವೇ ಆಗಿಲ್ಲ. ಹಾಗೂ ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಮನಸ್ಥಾಪ ಇಲ್ಲ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಚುನಾವಣೆಗೆ ನಿಂತರೆ ಬಹಳ ಸಂತೋಷ, ಆತನ ಪರವಾಗಿ ನಾನು ಪ್ರಚಾರ ಮಾಡುತ್ತೇನೆ' ಎಂದು ಕುಮಾರಸ್ವಾಮಿ ಮಗ ನಿಖಿಲ್ ಗೌಡ ಅವರು ಹೇಳಿದ್ದಾರೆ.ಪಕ್ಷದ ಹಿರಿಯರಾದ ದೇವೇಗೌಡ, ಕುಮಾರಸ್ವಾಮಿ ಅವರು ಹೇಳಿದವರಿಗೆ ಮಾತ್ರವೇ ಟಿಕೆಟ್ ನೀಡಲಾಗುತ್ತದೆ. ಕುಟುಂಬದ ಯಾವ ಸದಸ್ಯರೂ ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂಬುದು ಇನ್ನೂ ನಿಗದಿಯಾಗಿಲ್ಲ. ಅದನ್ನು ವರಿಷ್ಠರೇ ನಿರ್ಧರಿಸಲಿದ್ದಾರೆ ಎಂದು ನಿಖಿಲ್ ಗೌಡ ಹೇಳಿದ್ದಾರೆ. ಆ ಮೂಲಕ ಪ್ರಜ್ವಲ್ ರೇವಣ್ಣ ಅವರಿಗೆ ಇನ್ನೂ ಟಿಕೆಟ್ ನೀಡಲಾಗಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಮೊದಲ ಚಿತ್ರ ಜಾಗ್ವಾರ್ ಗೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇದೀಗ ಮಹಾಭಾರತ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ನಟಿಸುತ್ತಿದ್ದೇನೆ, ಸಿನಿಮಾರಂಗದಲ್ಲಿ ನೆಮ್ಮದಿಯಿಂದ ಇದ್ದೇನೆ ರಾಜಕೀಯ ನನಗೆ ಬೇಡ ಎಂದು ನಿಖಿಲ್ ಗೌಡ ಹೇಳಿದ್ದಾರೆ. ನಮ್ಮ ತಂದೆ ಮುಖ್ಯಮಂತ್ರಿ ಆಗಿದ್ದ 20 ತಿಂಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನಗಳಿಗೆ ಅರಿವಿದೆ. ಜನರು ಖಂಡಿತವಾಗಿಯೂ ಕುಮಾರಸ್ವಾಮಿ ಅವರ ಕೈಹಿಡಿಯಲಿದ್ದಾರೆ. ಮತ್ತೆ ಅವರೇ ಮುಖ್ಯಮಂತ್ರಿ ಆಗಿಯೇ ಆಗಲಿದ್ದಾರೆ ಎಂದು ನಿಖಿಲ್ ಗೌಡ ಭರವಸೆಯ ಮಾತನಾಡಿದ್ದಾರೆ.
Comments