ನೃತ್ಯಗಾರ್ತಿ ಸಿತಾರ ದೇವಿಗೆ ಗೂಗಲ್-ಡೂಡಲ್ ಗೌರವ ಅರ್ಪಣೆ
ಖ್ಯಾತ ಕಥಕ್ ಕಲಾವಿದೆ ಸಿತಾರಾ ದೇವಿ ಅವರಿಗೆ ಅಂತರ್ಜಾಲ ಸುದ್ದಿ ಜಾಲತಾಣ ಗೂಗಲ್-ಡೂಡಲ್ ಮೂಲಕ ಅವರ ಜನ್ಮ ದಿನಾಚರಣೆಯನ್ನು ನೆನಪಿಸಿದೆ. ಹೀಗಾಗಿ ಗೂಗಲ್ ತನ್ನ ಸರ್ಚ್ ಎಂಜಿನ್ ನಲ್ಲಿ ನೃತ್ಯಕಲಾವಿದೆಯ ಸುಂದರ ಚಿತ್ರ ಬಿಡಿಸುವ ಮೂಲಕ ಲೆಜೆಂಡ್ ನೃತ್ಯಗಾರ್ತಿಗೆ ಗೌರವ ಅರ್ಪಣೆ ಮಾಡಿದೆ.
ನವೆಂಬರ್ 8ರಂದು ಸಿತಾರಾ ದೇವಿ ಅವರ ಜನ್ಮ ದಿನವಾಗಿದ್ದು, ಇಂದು ಅವರ 97ನೇ ಜನ್ಮದಿನವಾಗಿದೆ. ಹೀಗಾಗಿ ಗೂಗಲ್ ತನ್ನ ಸರ್ಚ್ ಎಂಜಿನ್ ನಲ್ಲಿ ನೃತ್ಯಕಲಾವಿದೆಯ ಸುಂದರ ಚಿತ್ರ ಬಿಡಿಸುವ ಮೂಲಕ ಲೆಜೆಂಡ್ ನೃತ್ಯಗಾರ್ತಿಗೆ ಗೌರವ ಅರ್ಪಣೆ ಮಾಡಿದೆ. ಸಿತಾರಾ ದೇವಿ ಅವರ ಮೂಲ ವಾರಣಾಸಿಯಾದರೂ ಅವರು ಹುಟ್ಟಿದ್ದು ಮಾತ್ರ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ. ಅವರ ತಂದೆ ಸುಖದೇವ್ ಮಹಾರಾಜ್ ಕೂಡ ಕಥಕ್ ನೃತ್ಯ ಕಲಾವಿದರಾಗಿದ್ದರು. ಅವರ ತಾಯಿ ಮತ್ಸ್ಯ ಕುಮಾರ್ ಅವರು ನೇಪಾಳದ ರಾಜವಂಶಸ್ಥ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಸಿತಾರ ದೇವಿ ಅವರ ನೃತ್ಯ ಎಷ್ಟು ಖ್ಯಾತಿ ಗಳಿಸಿತ್ತು ಎಂದರೆ ಅವರ 12ನೇ ವಯಸ್ಸಿನಲ್ಲೇ ಹಿಂದಿ ಚಿತ್ರಕ್ಕಾಗಿ ನಿರ್ದೇಶಕ ನಿರಂಜನ್ ಶರ್ಮಾ ಎಂಬುವವರು ಅವರಿಗೆ ಅವಕಾಶ ನೀಡಿದ್ದರು. ಆ ಬಳಿಕ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ಸಿತಾರಾ ದೇವಿ ತಮ್ಮ ನೃತ್ಯ ಪ್ರದರ್ಶನ ಮಾಡಿದ್ದರು. 1951ರಲ್ಲಿ ತೆರೆಕಂಡ ನಾಗಿನ, 1954ರಲ್ಲಿ ರೋಟಿ, ವತನ್ ಮತ್ತು 1957ರಲ್ಲಿ ಅಂಜಲಿ ಚಿತ್ರಗಳಲ್ಲಿ ಸಿತಾರಾ ದೇವಿ ನೃತ್ಯ ಪ್ರದರ್ಶನ ನೀಡಿದ್ದರು. ನೃತ್ಯಕ್ಷೇತ್ರದಲ್ಲಿನ ಅವರ ಅಮೋಘ ಸಾಧನೆಗಾಗಿ 1969ರಲ್ಲಿ ಸಂಗೀತ್ ನಾಟಕ್ ಆಕಾಡೆಮಿ ಪ್ರಶಸ್ತಿ, 1973ರಲ್ಲಿ ಪದ್ಮಶ್ರೀ ಪ್ರಶಸ್ತಿ, 1995ರಲ್ಲಿ ಕಾಳಿದಾಸ ಸಮ್ಮಾನ್ ಪ್ರಶಸ್ತಿ ನೀಡಲಾಗಿತ್ತು. ಕೇಂದ್ರ ಸರ್ಕಾರ ಸಿತಾರಾ ದೇವಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಕೂಡ ಘೋಷಣೆ ಮಾಡಿತ್ತು. ಆದರೆ ಅವರು ಪ್ರಶಸ್ತಿಯನ್ನು ಕಾರಣಾಂತರಗಳಿಂದ ನಿರಾಕರಿಸಿದ್ದರು. ತಮ್ಮ 94ನೇ ವಯಸ್ಸಿನಲ್ಲಿ 2014ರ ನವೆಂಬರ್ 25ರಂದು ಸಿತಾರಾ ದೇವಿ ಅವರು ಮುಂಬೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು.
Comments