ಬಸವರಾಜ್ ಹೊರಟ್ಟಿಗೆ ಕೊಲೆ ಬೆದರಿಕೆ
ಜೆ.ಡಿ.ಎಸ್. ಪಕ್ಷದ ನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ.ಪೊಲೀಸರು ಪತ್ರದ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ. ಹುಬ್ಬಳ್ಳಿಯ ಉಣಕಲ್ ಗ್ರಾಮದಿಂದ ಪೋಸ್ಟ್ ಮಾಡಲಾಗಿರುವ ಪತ್ರ ಇದಾಗಿದ್ದು, ಹೊರಟ್ಟಿಯವರ ಕಚೇರಿ ಸಿಬ್ಬಂದಿ ಪೊಲೀಸರಿಗೆ ಕೊಟ್ಟಿದ್ದಾರೆ.
ಮುಂಬೈನ ಶಾರ್ಪ್ ಶೂಟರ್ಸ್ ಗಳಿಗೆ ನಿಮ್ಮ ಹತ್ಯೆಗೆ ಸುಪಾರಿ ನೀಡಲಾಗಿದೆ. ಒಂದೆರಡು ದಿನಗಳಲ್ಲೇ ನಿಮ್ಮನ್ನು ಕೊಲೆ ಮಾಡಲಾಗುತ್ತದೆ ಎಂದು ಬೆದರಿಕೆ ಪತ್ರ ಬರೆಯಲಾಗಿದೆ. ಹೊರಟ್ಟಿಯವರ ಕಚೇರಿಗೆ ನಿನ್ನೆ ಈ ಪತ್ರ ಬಂದಿದ್ದು, ಅದನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಲುಪಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೊರಟ್ಟಿ, ತಮಗೆ ಇದೇ ಮೊದಲ ಬಾರಿಗೆ ಬೆದರಿಕೆ ಪತ್ರ ಬಂದಿದೆ. ಪೊಲೀಸರೊಂದಿಗೆ ಮಾತನಾಡಿ ವಿಷಯ ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ಎಲ್ಲಾ ಪಕ್ಷದವರಿಗೂ ಬೇಕಾದ ಹೊರಟ್ಟಿಯವರು ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಕಾರಣಕ್ಕೆ ಅವರಿಗೆ ಬೆದರಿಕೆ ಹಾಕಿರಬಹುದೆಂದು ಹೇಳಲಾಗಿದೆ. ಪೊಲೀಸರ ತನಿಖೆಯ ಬಳಿಕ ನಿಜಾಂಶ ಬೆಳಕಿಗೆ ಬರಲಿದೆ.
Comments