'ದಿ ಸಿಟಿಜನ್ ಕನೆಕ್ಟ್' ಮೊಬೈಲ್ ಆಯಪ್ ಗೆ ಸಿಎಂ ಚಾಲನೆ

31 Oct 2017 1:53 PM | General
500 Report

'ದಿ ಸಿಟಿಜನ್ ಕನೆಕ್ಟ್' ಎಂಬ ಹೆಸರಿನ ಮೊಬೈಲ್ ಆಯಪ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿಂದು ಚಾಲನೆ ನೀಡಿದರು. ಮುಖ್ಯಮಂತ್ರಿಯವರು ತಮ್ಮ ಜನಸಂಪರ್ಕ ಕಾರ್ಯಕ್ರಮಗಳ ಅಂಗವಾಗಿ ಮೊಬೈಲ್ ಆಯಪ್‍ಗೆ ಚಾಲನೆ ನೀಡಿದ್ದು, ಈ ಆಯಪ್ ಅಳವಡಿಸಿಕೊಂಡು ಸರ್ಕಾರದ ಉಪಕ್ರಮಗಳು, ಸಾಧನೆಗಳ ಕುರಿತು ತಾಜಾ ಮಾಹಿತಿಯನ್ನು ಪಡೆಯಬಹುದು. ಜತೆಗೆ ಕುಂದು-ಕೊರತೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಮುಖ್ಯಮಂತ್ರಿ ನಡೆದು ಬಂದ ದಾರಿ, ಜಾಗೃತ ಮತ್ತು ಸಬಲ ನಾಗರಿಕರೊಂದಿಗೆ ಹೊಸ ಕರ್ನಾಟಕ ನಿರ್ಮಿಸುವ ಕುರಿತ ವಿಚಾರಗಳನ್ನು ಸಹ ತಿಳಿದುಕೊಳ್ಳಬಹುದು. ಮುಖ್ಯಮಂತ್ರಿ ಕಚೇರಿಯ ಕ್ಷಣ ಕ್ಷಣದ ಸುದ್ದಿಗಳ ಭಾಷಣ, ಸಂದರ್ಶನ ಮತ್ತಿತರ ಮಾಹಿತಿಗಳ ಲಿಂಕ್ ಲಭ್ಯವಿದೆ. ಬಳಕೆದಾರರು ಇಲಾಖಾವಾರು ತಮ್ಮ ಅಭಿಪ್ರಾಯವನ್ನು ನೇರವಾಗಿ ಮುಖ್ಯಮಂತ್ರಿ ಕಚೇರಿಯೊಂದಿಗೆ ಹಂಚಿಕೊಳ್ಳಲು ಅವಕಾಶವಿದೆ. ಯೋಜನೆಗಳನ್ನು ಪರಿಣಾಮಕಾರಿಯಾಗಿ ರೂಪಿಸುವುದು ಮತ್ತು ಅನುಷ್ಠಾನಗೊಳಿಸುವಲ್ಲಿ ಈ ಆಯಪ್ ಸಹಕಾರಿಯಾಗಲಿದೆ.

ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಸಾರ್ವಜನಿಕರು ಕೊಡುಗೆ ನೀಡಲು ಅವಕಾಶವಿದೆ. ಮುಖ್ಯಮಂತ್ರಿ ಅವರೊಂದಿಗೆ ಸಂವಾದ ನಡೆಸಲು ಮತ್ತು ಇತರೆ ಇಲಾಖೆಗಳ ಬಗ್ಗೆ ಸಲಹೆ ನೀಡಬಹುದಾಗಿದೆ. ಬಯೋಗ್ರಫಿ ವಿಭಾಗ, ವಿಡಿಯೋ ಗ್ಯಾಲರಿ ವಿಭಾಗಗಳು ಲಭ್ಯವಿದ್ದು, ಮುಖ್ಯಮಂತ್ರಿಗಳೊಂದಿಗೆ ಸಾಮಾಜಿಕ ಜಾಲ ತಾಣಗಳ ಮೂಲಕ ಸಂಪರ್ಕಿಸಬಹುದಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಆಯಪ್ ಅಭಿವೃದ್ಧಿಪಡಿಸಲಾಗಿದೆ.

 

Edited By

Shruthi G

Reported By

Shruthi G

Comments