ಶಿವಮೊಗ್ಗದಲ್ಲಿ ಪಾದಯಾತ್ರೆ ಆರಂಭಿಸಲಿರುವ ಜೆಡಿಎಸ್
ಕರ್ನಾಟಕ ಜೆಡಿಎಸ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಜಿಲ್ಲೆಯ ಮೂವರು ಶಾಸಕರ ನೇತೃತ್ವದಲ್ಲಿ ನವೆಂಬರ್ 5ರಿಂದ 8ರ ತನಕ ಪಾದಯಾತ್ರೆ ನಡೆಯಲಿದೆ.
ಸೊರಬ ಶಾಸಕ ಮಧು ಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ‍್ಯನಾಯ್ಕ, ಭದ್ರಾವತಿ ಶಾಸಕ ಅಪ್ಪಾಜಿ ಗೌಡ ನೇತೃತ್ವದಲ್ಲಿ ಕುಬಟೂರಿನಿಂದ ಶಿವಮೊಗ್ಗದ ತನಕ ಬೃಹತ್ ಪಾದಯಾತ್ರೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.
ಶಾಸಕ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. 'ಅನ್ನಭಾಗ್ಯದಿಂದ ಶೂ ಭಾಗ್ಯದ ತನಕ ಎಲ್ಲಾ ಭಾಗ್ಯವನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬೆಳೆಗಳಿಗೆ ನೀರಾವರಿ ಹಾಗೂ ಜಾನುವಾರುಗಳಿಗೆ ನೀರು ಕೊಡುವ ಭಾಗ್ಯ ಕರುಣಿಸುವಂತೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ' ಎಂದು ಹೇಳಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದಲ್ಲಿ ನೀರಾವರಿ ಯೋಜನೆ ಜಾರಿಗೊಳಿಸಲು ಏನೂ ಮಾಡಲಿಲ್ಲ. ಕುಮಾರ್ ಬಂಗಾರಪ್ಪ ಅವರು ನೀರಾವರಿ ಸಚಿವರಾಗಿದ್ದಾಗಲೂ ಗಮನ ಹರಿಸಲಿಲ್ಲ. ಸತತ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ರೈತರಿಗಾಗಿ ಪಕ್ಷ ಹೋರಾಟ ಹಮ್ಮಿಕೊಂಡಿದೆ ' ಎಂದು ಮಧು ಬಂಗಾರಪ್ಪ ತಿಳಿಸಿದರು.
Comments