ಎಚ್.ಡಿ.ಕೆ ಖರೀದಿಸಿರುವ ಐಷಾರಾಮಿ ಬಸ್ ನಲ್ಲಿರುವ ಸೌಲಭ್ಯಗಳೇನು ಗೊತ್ತಾ?



ಇತ್ತೀಚಿಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ಸದ್ಯ ಚೇತರಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಮುಂದಿನ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ತೆರಳಲು 1 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಸ್ ಖರೀದಿಸಿದ್ದಾರೆ.
ನವೆಂಬರ್ 15ರಿಂದ ತಮ್ಮ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆರಂಭಿಸಲಿರುವ ಕುಮಾರಸ್ವಾಮಿ, ಮೊದಲ ಗ್ರಾಮ ವಾಸ್ತವ್ಯ ಬಸವನಬಾಗೇವಾಡಿಯಲ್ಲಿ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಎಚ್.ಡಿ.ಕುಮಾರಸ್ವಾಮಿಯವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಹವಾನಿಯಂತ್ರಿತ ಸುಸಜ್ಜಿತ ಬಸ್ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬಸ್ಸಿನಲ್ಲಿ, ಊಟ-ತಿಂಡಿ, ಬೆಡ್ ರೂಮ್, ಚಿಕ್ಕ ಮೀಟಿಂಗ್ ಹಾಲ್, ಅಡುಗೆ ಮನೆ, ಶೌಚಾಲಯ, ಸ್ನಾನ ಗೃಹ, ಬಸ್ಸಿನಲ್ಲಿಯೇ ನಿಂತು ಭಾಷಣ ಮಾಡಲು ಅನುಕೂಲವಾಗುವಂತ ವಿನ್ಯಾಸ ಮಾಡಲಾಗಿದೆ.
ಗ್ರಾಮ ವಾಸ್ತವ್ಯದ ಸಂದರ್ಭ ವೈದ್ಯರು, ಯೋಗ ತರಬೇತುದಾರರು ಹಾಗೂ ಅಡುಗೆಯವರು ಕುಮಾರಸ್ವಾಮಿಯವರ ಜತೆಗಿರಲಿದ್ದಾರೆ. ಆರೋಗ್ಯ ಸಮಸ್ಯೆಯ ಕಾರಣಕ್ಕೆ ಈ ಎಚ್ಚರಿಕೆ ತೆಗೆದುಕೊಳ್ಳಲಾಗುತ್ತಿದ್ದು, ತಮಿಳುನಾಡಿನ ಕರೂರಿನಲ್ಲಿ ಈ ಐಷಾರಾಮಿ ಬಸ್ ನಿರ್ಮಾಣವಾಗುತ್ತಿದೆ.ಅಶೋಕ್ ಲೇಲ್ಯಾಂಡ್ ಸಂಸ್ಥೆಯ ಈ ಬಸ್‌ನ ಬೆಲೆ 1 ಕೋಟಿ ರೂಪಾಯಿ. ಇದರಲ್ಲಿ ಹೈಡ್ರಾಲಿಕ್ ಲಿಫ್ಟ್ ವೇದಿಕೆ ಇದ್ದು, ಕುಮಾರಸ್ವಾಮಿ ಅದರ ಮೇಲೆ ನಿಂತು ಭಾಷಣ ಮಾಡಬಹುದಾಗಿದೆ. ಅತ್ಯಾಧುನಿಕ ಏರ್ ಸಸ್ಪೆನ್ಷನ್ ಹೊಂದಿರುವ ಈ ಬಸ್ ಕುಮಾರಸ್ವಾಮಿ ಅವರ ಆರೋಗ್ಯ ಮತ್ತು ಶಕ್ತಿಯನ್ನು ಕುಂದಿಸದಂತೆ ನೋಡಿಕೊಳ್ಳಲಿದೆ.
ಜುಲೈನಿಂದ ಬಸ್ ವಿನ್ಯಾಸ ಕಾರ್ಯ ಸೇಲಂನಲ್ಲಿ ನಡೆಯುತ್ತಿದೆ. ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೋಹಿತ್ ಅಲ್ತಾಫ್ ನೇತೃತ್ವದಲ್ಲಿ ಬಸ್ ವಿನ್ಯಾಸ ಕಾರ್ಯ ನಡೆಯುತ್ತಿದೆ. ಅವರೇ ಇದನ್ನು ಕುಮಾರಸ್ವಾಮಿಯವರಿಗೆ ಕೊಡುಗೆಯಾಗಿ ನೀಡುತ್ತಿದ್ದಾರೆ.ಒಟ್ಟು 50 ವಿಧಾನಸಭಾ ಕ್ಷೇತ್ರಗಳ 62 ತಾಲೂಕುಗಳಲ್ಲಿ ತಲಾ ಒಂದೊಂದು ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಈ ವೇಳೆ ದಿನಕ್ಕೆ 20 ಗ್ರಾಮಗಳಿಗೆ ಭೇಟಿ ನೀಡುವ ಉದ್ದೇಶವನ್ನು ಕುಮಾರಸ್ವಾಮಿ ಹೊಂದಿದ್ದಾರೆ.ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸಿಂಗಾಪುರದಲ್ಲಿ 15 ದಿನ ವಿಶ್ರಾಂತಿ ಪಡೆದು ರಾಜ್ಯಕ್ಕೆ ವಾಪಸ್ಸಾಗಿರುವ ಕುಮಾರಸ್ವಾಮಿ, 3 ತಿಂಗಳ ಕಾಲ ನಿರಂತರ ಪ್ರವಾಸ ನಡೆಸಲಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿಯವರು ಕೂಡ ರಾಜ್ಯ ಪ್ರವಾಸಕ್ಕೆ ಸಾಥ್ ನೀಡಲಿರುವುದು ವಿಶೇಷ ಸಂಗತಿ ಎನ್ನಬಹುದು.
Comments