ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ಕಾರ್ಯಕರ್ತರ ಪಟ್ಟು

ಚನ್ನಪಟ್ಟಣ : ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಅನಿತಾಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ತೀರ್ಮಾನ ಕೈಗೊಂಡಿದ್ದು, ನಮ್ಮ ಕ್ಷೇತ್ರಕ್ಕೆ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂದು ಮಾಜಿ ಶಾಸಕ ಎಂ.ಸಿ.ಅಶ್ವಥ್ ಜೆಡಿಎಸ್ ವರಿಷ್ಟ ದೇವೇಗೌಡರನ್ನು ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಜಿಲ್ಲಾ ಸಭೆಯಲ್ಲಿ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು ಚನ್ನಪಟ್ಟಣ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿಯನ್ನು ಹುಡುಕುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.
ಇದರಿಂದ ತಾಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಏರ್ಪಟ್ಟಿದೆ. ಕಳೆದ ಬಾರಿ ಅನಿತಾ ಕಡಿಮೆ ಅಂತರದ ಮತಗಳಿಂದ ಪರಾಭವಗೊಂಡಿದ್ದರು. ಈ ಬಾರಿ ಅವರ ಮೇಲೆ ತಾಲೂಕಿನ ಜನತೆಗೆ ಅನುಕಂಪವಿದ್ದು, ಗೆಲ್ಲುವ ಕಾಲ ಬಂದಿದೆ. ಈ ಸಂದರ್ಭದಲ್ಲಿ ಅವರನ್ನು ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಸುವುದು ಸೂಕ್ತವಾಗಿದೆ. ತಾಲೂಕಿನ ಜನತೆ ಸಹ ಪಕ್ಷಾತೀತವಾಗಿ ಬೆಂಬಲ ನೀಡುತ್ತಿದ್ದು , ಈ ಬಗ್ಗೆ ವರಿಷ್ಟರೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಕುಟುಂಬ ರಾಜಕಾರಣ ಬೇಡ ಎಂದು ದೊಡ್ಡಗೌಡರು ಅನಿತಾ ಸ್ಪರ್ಧೆಗೆ ಹಸಿರು ನಿಶಾನೆ ತೋರಿಲ್ಲ ಎಂಬ ಮಾತುಗಳು ಕೇಳಿಬಂದಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‍ಕುಮಾರ್ ಉತ್ತರಿಸಿ, ತಾಲೂಕಿನ ಒಳಿತಿಗಾಗಿ ಕುಟುಂಬ ರಾಜಕಾರಣ ತಪ್ಪಲ್ಲ. ನಾವು ಒಗ್ಗಟ್ಟಿನಿಂದ ದುಡಿದು ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು, ಮುಖಂಡರ ನಿಯೋಗದೊಂದಿಗೆ ದೇವೇಗೌಡರನ್ನು ಬೇಟಿ ಮಾಡಿ ಅವರ ಕೈಕಾಲು ಹಿಡಿದಾದರೂ ನಾವು ಒಪ್ಪಿಸುತ್ತೇವೆ ಎಂದು ಹೇಳಿದರು. ನಗರಸಭಾ ಸದಸ್ಯ ಉಮಾಶಂಕರ್ ಮಾತನಾಡಿ, ಜೆಎಡಿಎಸ್‍ನಿಂದ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ನಾವು ಅವರ ಗೆಲುವಿಗೆ ಶ್ರಮಿಸುತ್ತೇವೆ. ಆದರೂ ಅನಿತಾ ಸ್ಪರ್ಧೆಯಿಂದಲೇ ಯೋಗೇಶ್ವರ್ ಅವರನ್ನು ಸೋಲಿಸಲು ಸಾಧ್ಯ. ಈ ನಿಟ್ಟಿನಲ್ಲಿ ವರಿಷ್ಟರ ಮನೆ ಮುಂದೆ ಉಪವಾಸ ಮಾಡಿಯಾದರೂ ಅನಿತಾ ಅವರನ್ನು ತಾಲೂಕಿಗೆ ಕರೆತರುತ್ತೇವೆ ಎಂದು ಹೇಳಿದರು. ನಗರ ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಣ್ಣ, ಎಂ.ಸಿ.ಕರಿಯಪ್ಪ, ಹನುಮಂತಯ್ಯ, ಮುಖಂಡರಾದ ವಡ್ಡರಹಳ್ಳಿ ರಾಜಣ್ಣ. ಜಯಕಾಂತ್, ರೇಖಾ ಉಮಾಶಂಕರ್, ನಗರಸಭಾ ಸದಸ್ಯರಾದ ಜಭಿಉಲ್ಲಾಖಾನ್ ಘೋರಿ, ಶಶಿಕುಮಾರ್, ಜೆಸಿಬಿ ಲೋಕೇಶ್, ಅಮೀದ್ ಮುನಾವರ್ ಇತರರು ಉಪಸ್ಥಿತರಿದ್ದರು.
Comments