ಸಿಲಿಂಡರ್ ಸ್ಫೋಟಗೊಂಡು, ಕಟ್ಟಡ ಕುಸಿತ, 4 ಶವಗಳು ಪತ್ತೆ

ಅಡುಗೆ ಮನೆಯಲ್ಲಿದ್ದ ಸಿಲಿಂಡರ್'ವೊಂದು ಸ್ಫೋಟಗೊಂಡ ಪರಿಣಾಮ ಮೂರು ಅಂತಸ್ತಿನ ಮನೆಯೊಂದು ಕುಸಿದುಬಿದ್ದಿದ್ದು, ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಈಜಿಪುರದ ಗುಂಡಪ್ಪ ಲೇಔಟ್'ನಲ್ಲಿ ಸೋಮವಾರ ನಡೆದಿದೆ.
ನಾಲ್ವರ ಪೈಕಿ ಮೂವರನ್ನು ಗುರುತಿಸಲಾಗಿದೆ. ಮೃತರನ್ನು ಶರವಣ (44), ಅಶ್ವಿನಿ (22) ಹಾಗೂ ಸಂಜನಾ ಎಂದು ಹೇಳಲಾಗುತ್ತಿದೆ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂರು ಅಂತಸ್ತಿನ ಮನೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಇದರಂತೆ ಈವರೆಗೂ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆಗೊಳಪಟ್ಟವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕಟ್ಟಡದ ಅವಶೇಷಗಳಡಿ ಮತ್ತಷ್ಟು ಜನರು ಸಿಲುಕಿಕೊಂಡಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿಯವರು ಪರಿಶೀಲನೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
Comments