ಉಪಕಾರ ಕಾಲೋನಿಗೆ ಸರ್ಕಾರದಿಂದ ಯಾವುದೇ ಉಪಕಾರವಿಲ್ಲ

ಈ ಕಾಲೋನಿಯ ಹೆಸರು ಉಪಕಾರವಾಗಿದ್ದು, ಇಲ್ಲಿಗೊಮ್ಮೆ ತೆರಳಿದರೆ ಸರ್ಕಾರದ ಕಡೆಯಿಂದ ಯಾವುದೇ ಉಪಕಾರವಾಗಿಲ್ಲ ಎಂಬುದನ್ನು ಇಲ್ಲಿನ ಜನರು ಸಾಗಿಸುತ್ತಿರುವ ಶೋಚನೀಯ ಬದುಕು ಹೇಳುತ್ತದೆ. ಪಟ್ಟಣದ ರಂಗುರಂಗಿನ ಬದುಕಿನಿಂದ ದೂರವಾಗಿ ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ಇಲ್ಲಿನ ಜನರು ಸರಿಯಾದ ಸೂರು ಇಲ್ಲದೆ, ಹೊತ್ತಿನ ಕೂಳಿಗೂ ಪರದಾಡುತ್ತ ಜೀವನ ಸಾಗಿಸುವಂತಾಗಿದೆ.
ಆದರೆ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ಮಾತ್ರ ನನಸಾಗಿಲ್ಲ ಎಂಬುದಕ್ಕೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ 'ಉಪಕಾರ ಕಾಲೋನಿ' ಸಾಕ್ಷಿ.ಕರ್ನಾಟಕ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯ ಕಾಡಂಚಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನರು ವಾಸಿಸುತ್ತಿದ್ದು, ಇವರು ಸಮಾಜದ ಮುಖ್ಯವಾಹಿನಿಗೆ ಬರಲು ಇನ್ನೂ ಕೂಡ ಸಾಧ್ಯವಾಗದೆ ಆದಿ ಮಾನವರಂತೆ ಸೌಲಭ್ಯವಂಚಿತ ಬದುಕು ಬದುಕುತ್ತಿದ್ದಾರೆ. ಸಾಧನೆಗಳ ದೊಡ್ಡ ಪಟ್ಟಿಯನ್ನೇ ನಮ್ಮ ಮುಂದೆ ನೀಡುವ ರಾಜಕಾರಣಿಗಳ ಆಶಸ್ವಾಸನೆಗಳು ಈಡೇರಿವೆಯಾ ಎಂಬುದು ಇಂತಹ ಕಾಲೋನಿಗಳಿಗೆ ಹೋಗಿ ನೋಡಿದರೆ ಗೊತ್ತಾಗಿಬಿಡುತ್ತದೆ!
ಮೂಲಸೌಕರ್ಯವೇ ಇಲ್ಲ!
ರಸ್ತೆ, ಕುಡಿಯುವ ನೀರು, ವಿದ್ಯುತ್, ಉತ್ತಮ ಮನೆಗಳಿಲ್ಲದೆ ಮುರುಕು ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಾ ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗಲೂ ಸಾಧ್ಯವಾಗದೆ ಮನೆಯಲ್ಲೇ ನರಳುತ್ತಾ ಸಾಯುವ ಇವರ ಬದುಕಿನತ್ತ ಯಾರೂ ಗಮನಹರಿಸದಿರುವುದು ಮಾತ್ರ ದೇಶದ ದುರ್ದೈವವಾಗಿದೆ.
Comments