ಎತ್ತಿನಹೊಳೆ ಕಾಮಗಾರಿಗೆ ಎನ್ ಜಿಟಿ ಯಿಂದ ಗ್ರೀನ್ ಸಿಗ್ನಲ್
ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲುಸೀಮೆ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಎತ್ತಿನ ಹೊಳೆ ಯೋಜನೆ ಮೊದಲ ಹಂತದ ಕಾಮಗಾರಿಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಗ್ರೀನ್ ಸಿಗ್ನಲ್ ನೀಡಿದೆ.
ಯೋಜನೆ ಕಾಮಗಾರಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಕೆ.ಎನ್.ಸೋಮಶೇಖರ್ ಎಂಬುವರು ದೆಹಲಿಯಲ್ಲಿರುವ ಮುಖ್ಯ ಹಸಿರು ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ನಿನ್ನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ದೂರುದಾರರ ಅರ್ಜಿ ವಜಾಗೊಳಿಸಿ ಕಾಮಗಾರಿ ಪ್ರಾರಂಭಿಸಲು ಕೆಲವು ಷರತ್ತು ವಿಧಿಸಿ ಆದೇಶ ನೀಡಿದೆ ಎಂದು ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಎತ್ತಿನಹೊಳೆ ಯೋಜನೆಯನ್ನು ಕೇವಲ ಕುಡಿಯುವ ನೀರಿನ ಯೋಜನೆ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದೇವೆ. ಇದು ನೀರಾವರಿ ಯೋಜನೆಯಲ್ಲ ಎಂಬುದನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟೆವು ಎಂದರು. ಸಂವಿಧಾನದ 21ನೆ ವಿಧಿ ಪ್ರಕಾರ, ಪ್ರತಿಯೊಬ್ಬರಿಗೂ ಶುದ್ಧ ನೀರು ಪೂರೈಸುವುದು ಆಯಾ ಸರ್ಕಾರಗಳ ಕರ್ತವ್ಯ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರಿಂದ ದೂರುದಾರರ ಅರ್ಜಿಯನ್ನು ವಜಾ ಮಾಡಿದೆ ಎಂದು ಅವರು ಹೇಳಿದರು.
ಅರಣ್ಯ ಮತ್ತು ಪರಿಸರ ಇಲಾಖೆಗೆ ನಾವು ಎಲ್ಲಿಯೂ ಹಾನಿಯಾಗದಂತೆ ಯೋಜನೆ ಪ್ರಾರಂಭಿಸುತ್ತಿದ್ದೇವೆ.
ಕೇಂದ್ರ ಸರ್ಕಾರ ಈ ಯೋಜನೆಗೆ ಒಪ್ಪಿಗೆ ಸೂಚಿಸಿರುವುದರಿಂದ ಅರ್ಜಿದಾರರ ಮನವಿ ಪರಿಗಣಿಸದಂತೆ ಪೀಠಕ್ಕೆ ಕೋರಿಕೊಂಡೆವು. ನ್ಯಾಯಪೀಠ ನಮ್ಮ ಮನವಿಯನ್ನು ಎತ್ತಿ ಹಿಡಿದಿದೆ ಎಂದು ಅವರು ವಿವರಿಸಿದರು. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಸಿಗುವ ಕುಡಿಯುವ ನೀರಿನಲ್ಲಿ ಪ್ಲೊರೈಡ್ ಅಂಶ ಸೇರಿದಂತೆ ಕೆಲವು ರಾಸಾಯನಿಕ ವಸ್ತುಗಳು ಮಿಶ್ರಣವಾಗಿರುವುದರಿಂದ ಇದು ಮನುಷ್ಯನ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಇದರಿಂದ ಶಾಶ್ವತವಾಗಿ ಊನ ಉಂಟಾಗುವುದು, ಕೈ-ಕಾಲು ಸ್ವಾಧೀನ ಕಳೆದುಕೊಳ್ಳುವುದು ಸೇರಿದಂತೆ ಹಲವು ರೀತಿಯ ದುಷ್ಪರಿಣಾಮಗಳು ಉಂಟಾಗುವುದನ್ನು ನ್ಯಾಯಪೀಠದ ಗಮನಕ್ಕೆ ತರಲಾಗಿದೆ. ಹೀಗಾಗಿ ನ್ಯಾಯಾಲಯ ನಮ್ಮ ಮನವಿಗೆ ಮಹತ್ವ ನೀಡಿದೆ ಎಂದು ಹೇಳಿದರು.
Comments