ಆಹಾರ ಹುಡುಕಿಕೊಂಡು ಬಂದು ತಾನೇ ಆಹಾರವಾದ ಹೆಬ್ಬಾವು ...

ದೈತ್ಯ ಹೆಬ್ಬಾವು ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ ಆತನ ಎಡಗೈಯ ಮೇಲೆ ಪ್ರಹಾರ ಮಾಡಿತ್ತು. ದಾಳಿಯ ವೇಳೆ ಅಲ್ಲಿದ್ದ ಗ್ರಾಮಸ್ಥರು ದೈತ್ಯ ಹೆಬ್ಬಾವನ್ನು ಹಿಡಿದು, ಕೊಂದು ಫ್ರೈ ಮಾಡಿ ತಿಂದ ಘಟನೆ ಇಂಡೋನೇಶಿಯಾದ ಪಿಕನ್ಬರು ಎಂಬಲ್ಲಿ ನಡೆದಿದೆ.
ಇಲ್ಲಿನ ಸುಮತ್ರಾ ದ್ವೀಪದಲ್ಲಿರುವ ತಾಳೆ ತೋಟವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ರಾಬರ್ಟ್ ನಾಬಬನ್ ಎಂಬಾತನ ಮೇಲೆ ದೈತ್ಯ ಹೆಬ್ಬಾವು ದಾಳಿ ಮಾಡಿದೆ. ಈ ಹೆಬ್ಬಾವು ಸುಮಾರು 7.8(25.6 ಅಡಿ) ಮೀಟರ್ ನಷ್ಟು ಉದ್ದವಿತ್ತು. ಇದು ತುಂಬಾ ದೊಡ್ಡದಿತ್ತು ಎಂದು ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ವಿವರ ನೀಡಿದ್ದಾರೆ. ನಾಬಬನ್ ಗೆ ಹೆಬ್ಬಾವನ್ನು ತಿನ್ನುವ ಮನಸ್ಸಾಗಿತ್ತು. ಹೀಗಾಗಿ ಆತ ಅದನ್ನು ಹಿಡಿಯಲು ಹೋದಾಗ ಆತನ ಮೇಲೆ ದಾಳಿ ಮಾಡಿದೆ. ಆತನ ಎಡಗೈಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ನಾಬಬನ್ ಬೊಬ್ಬೆ ಕೇಳಿ ಮತ್ತೊಬ್ಬ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರು ಸ್ಥಳಕ್ಕೆ ಆಗಮಿಸಿ ದೈತ್ಯ ಹೆಬ್ಬಾವನ್ನು ಹಿಡಿದಿದ್ದಾರೆ. ಇದರ ಬಳಿಕ ಹೆಬ್ಬಾವನ್ನು ಕೊಂದ ಜನರು ಅದನ್ನು ಗ್ರಾಮದಲ್ಲಿ ಪ್ರದರ್ಶಿಸಿದ ಬಳಿಕ ಫ್ರೈ ಮಾಡಿಕೊಂಡು ತಿಂದಿದ್ದಾರೆ. ಇಷ್ಟು ದೊಡ್ಡ ಹೆಬ್ಬಾವುಗಳು ಇಂಡೋನೇಶಿಯಾ ಮತ್ತು ಫಿಲಿಫೈನ್ಸ್ ನಲ್ಲಿ ಸಾಮಾನ್ಯವಾಗಿ ಕಾಣಸಿಗುವುದು. ಕೆಲವು ತಿಂಗಳ ಮೊದಲು 25ರ ಹರೆಯದ ರೈತನೊಬ್ಬನನ್ನು ಹೆಬ್ಬಾವು ನುಂಗಿ ಹಾಕಿತ್ತು.
Comments