ಹೋದ ವರ್ಷದಷ್ಟು ಜೋರಿಲ್ಲ ಬಿಡಿ ಈ ವರ್ಷದ ಹಬ್ಬ, ಮಾರಾಟಗಾರರ ಗೋಳು

ಹೋದ ವರ್ಷದಂತೆ ಈ ಬಾರಿ ಹಬ್ಬ ಇಲ್ಲ. ವ್ಯಾಪಾರ ಮಾಡೋರು ಸಿಕ್ಕಾಪಟ್ಟೆ ಜಾಸ್ತಿ ಆಗಿದ್ದಾರೆ. ಸರಕು ಕೂಡ ವಿಪರೀತ ಹೆಚ್ಚಾಗಿದೆ. ಮಾರ್ಕೆಟ್ ನಲ್ಲಿ ಬೆಲೆ ಇಲ್ಲದಂತಾಗಿದೆ. ಏನು ಮಾಡಬೇಕು ಅಂತಲೇ ಗೊತ್ತಾಗ್ತಿಲ್ಲ. ಒಟ್ಟಿನಲ್ಲಿ ತಾವು ತಂದ ಸರಕಿಗೆ ಬೆಲೆ ಸಿಗ್ತಿಲ್ಲ ಅನ್ನೋದು ಮಾರಾಟಗಾರರ ದುಃಖ. ಅದೇಕೋ ಗ್ರಾಹಕರೇ ಅತ್ತ ಸುಳಿಯುತ್ತಿಲ್ಲ ಅನ್ನೋದು ಮಾರಾಟಗಾರರ ದುಃಖ.
ರಸ್ತೆಯಲ್ಲಿ ಹೂವು-ಹಣ್ಣು-ಕುಂಬಳಕಾಯಿ-ನಿಂಬೆಹಣ್ಣು ಮಾರುತ್ತಿದ್ದವರ ಮುಖದಲ್ಲಿ ಹಬ್ಬದ ಉತ್ಸಾಹವಿರಲಿಲ್ಲ. ಮೋಡ ಕವಿದ ವಾತಾವರಣದಲ್ಲಿ ಮಾರಾಟ ಮಾಡುವವರ ಮುಖದ ಮೇಲೂ ಚಿಂತೆಯ ಗೆರೆಗಳು ಇಣುಕುತ್ತಿದ್ದವು. 'ಹೋದ ವರ್ಷದಷ್ಟು ಜೋರಿಲ್ಲ ಬಿಡಿ ಈ ವರ್ಷದ ಹಬ್ಬ' ಅಂತಲೇ ಮಾತು ಶುರು ಮಾಡುತ್ತಿದ್ದರು. ಶುಕ್ರವಾರ ಆಯುಧ ಪೂಜೆ ಇದೆ. ಕುಂಬಳಕಾಯಿ, ಬಾಳೆ ಕಂದು, ನಿಂಬೆ ಹಣ್ಣು ವಿಪರೀತ ಬೇಡಿಕೆಯಲ್ಲಿರಬೇಕು. ಇದರ ಜತೆಗೆ ಹೂವು, ಹಣ್ಣು, ತೆಂಗಿನಕಾಯಿ ಸಹ ಗ್ರಾಹಕರಿಗಾಗಿ ಕಾದು ಕಳೆಗುಂದಿದಂತೆ ಕಂಡವು. ಇಪ್ಪತ್ತು ರೂಪಾಯಿಯಿಂದ ತೀರಾ ಹೆಚ್ಚೆಂದರೆ ನೂರು ರೂಪಾಯಿ ಕುಂಬಳ ಕಾಯಿಗೆ, ಹತ್ತು ರೂಪಾಯಿಗೆ ನಾಲ್ಕು ನಿಂಬೆಹಣ್ಣು. ಸೈಜಿನಲ್ಲಿ ಸ್ವಲ್ಪ ದಪ್ಪವಿರುವ ನಿಂಬೆಹಣ್ಣು ಇಪ್ಪತ್ತು ರೂಪಾಯಿಗೆ ಆರು ಮಾರುತ್ತಿದ್ದರು. ಇಪ್ಪತ್ತು ರೂಪಾಯಿಗೆ ಸಣ್ಣ ಸೈಜಿನ ಬಾಳೆ ಕಂದು ದೊರೆಯುತ್ತಿತ್ತು. ಮಲ್ಲಿಗೆ ಹೂವು ಮಾರಿಗೆ ನೂರೈವತ್ತು ರೂಪಾಯಿಯಾದರೆ, ಸೇವಂತಿಗೆ ಹೂವು ಮಾರಿಗೆ ನೂರು ರೂಪಾಯಿ, ಬಾಳೆಹಣ್ಣು ಕೇಜಿಗೆ ನೂರು ರೂಪಾಯಿ ಇತ್ತು. ಉಳಿದ ಹಣ್ಣುಗಳ ಬೆಲೆ ಅದರ ಅಣ್ಣ-ತಮ್ಮಂದಿರಂತೆ ಇದ್ದವು. ನೂರು ರೂಪಾಯಿಗೆ ನೂರು ವೀಳ್ಯದೆಲೆ ಮಾರಾಟ ಆಗುತ್ತಿತ್ತು. ಮಾರ್ಕೆಟ್ ನಲ್ಲಿ ತಮಿಳುನಾಡಿನ ಕುಂಬಳಕಾಯಿ ಬಂದು ಹೀಗೆ ಬೆಲೆ ಬಿದ್ದು ಹೋಗಿದೆಯಾ ಎಂಬ ಅನುಮಾನ ಎಂದು ಮಾರಾಟಗಾರರು ದುಗುಡ ತೋಡಿಕೊಂಡರು.
Comments