ಐಟಿ ದಾಳಿ : ಎಸ್.ಎಂ.ಕೆ ಅಳಿಯ ಸಿದ್ದಾರ್ಥ್ ಕಚೇರಿಯಲ್ಲಿ ಸಿಕ್ಕಿದ್ದು 650 ಕೋಟಿ. ರೂ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ್ ಅವರ ಕಚೇರಿ ನಿವಾಸಗಳಿಗೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಇದೀಗ ಆ ಸಂಸ್ಥೆಯು 650 ಕೋಟಿ ರೂ.ನಷ್ಟು ಆದಾಯವನ್ನು ಬಹಿರಂಗಪಡಿಸದೆ ಮುಚ್ಚಿಟ್ಟಿದ್ದನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
ಸಿದ್ಧಾರ್ಥ ಅವರಿಗೆ ಸೇರಿದ ಹಲವು ಕಚೇರಿಗಳ ಮೇಲೆ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಚೆನ್ನೈ ಹಾಗೂ ಮುಂಬೈಯಲ್ಲಿ ದಾಳಿಗಳು ನಡೆದಿವೆ. ''ಕಾಫಿ, ಪ್ರವಾಸೋದ್ಯಮ, ಐಟಿ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಮೂಹದ ಕಚೇರಿಗಳ ಮೇಲೆ ನಡೆದ ದಾಳಿಗಳ ನಂತರ ರೂ.650 ಕೋಟಿಗೂ ಅಧಿಕ ಆದಾಯವನ್ನು ಮುಚ್ಚಿ ಹಾಕಿರುವ ವಿಚಾರವನ್ನು ಒಪ್ಪಿಕೊಳ್ಳಲಾಗಿದೆ. ಆದರೆ ಸಂಸ್ಥೆ ಬಹಿರಂಗ ಪಡಿಸದೇ ಇರುವ ಆದಾಯವು ಇನ್ನೂ ದೊಡ್ಡ ಮೊತ್ತದ್ದಾಗಿರಬಹುದು'' ಎಂದು ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ಹಲವಾರು ಇತರ ಉಲ್ಲಂಘನೆಗಳ ಬಗ್ಗೆ ತಿಳಿದು ಬಂದಿದೆಯಾದರೂ ಅವುಗಳ ಬಗ್ಗೆ ಸಾಕ್ಷ್ಯಗಳು ದೊರೆತಿರುವ ಹೊರತಾಗಿಯೂ ಸಂಸ್ಥೆ ಏನನ್ನೂ ಬಹಿರಂಗಗೊಳಿಸಿಲ್ಲ ಎಂದೂ ಇಲಾಖೆ ತಿಳಿಸಿದೆ. ದಾಳಿಗಳ ಬಗ್ಗೆ ಇಲ್ಲಿಯ ತನಕ ಸಿದ್ಧಾರ್ಥ ಅಥವಾ ಕೃಷ್ಣ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದಶಕಗಳ ಕಾಲ ಕಾಂಗ್ರೆಸ್ಸಿನಲ್ಲಿದ್ದ ಕೃಷ್ಣ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿಯಾದಾಗ ಆಡಳಿತ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ದೂರಿತ್ತಲ್ಲದೆ, ಕೇಂದ್ರ ಸರಕಾರ ಸಿಬಿಐ ಅನ್ನು ದುರುಪಯೋಗ ಪಡಿಸುತ್ತಿದೆ ಎಂದೂ ಆರೋಪಿಸಿತ್ತು. ಇದೀಗ ಕೃಷ್ಣ ಅಳಿಯನ ಕಚೇರಿ ನಿವಾಸಗಳ ಮೇಲಿನ ದಾಳಿಯಿಂದ ಕೇಂದ್ರ ಸಿಬಿಐ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿಲ್ಲ ಎಂದು ಸಾಬೀತಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
Comments