ಬೇನಾಮಿ ಆಸ್ತಿ ವಿವರ ನೀಡುವ ಮಾಹಿತಿದಾರರಿಗೆ 1 ಕೋಟಿರು ಬಹುಮಾನ..!!

ನವದೆಹಲಿ: ಬೇನಾಮಿ ಆಸ್ತಿ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುವ ರಹಸ್ಯ ಮಾಹಿತಿದಾರರಿಗೆ ಒಂದು ಕೋಟಿ ರು ಬಹುಮಾನ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಯೋಜನೆ ಮುಂದಿನ ತಿಂಗಳಿನಿಂದ ಜಾರಿಗೆ ಬರುವ ಸಾಧ್ಯತೆಯಿದ್ದು, 15 ಲಕ್ಷದಿಂದ 1 ಕೋಟಿ ರು ವರೆಗೆ ಬಹಮಾನ ನೀಡಲಾಗುವುದು ಎಂದು ಕೇಂದ್ರ ತೆರಿಗೆ ನಿರ್ದೇಶನ ಮಂಡಳಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಹಿತಿದಾರ ನೀಡುವ ವಿವರ ಅಧಿಕೃತವಾಗಿರಬೇಕು ಹಾಗೂ ಮಾಹಿತಿದಾರನ ಗುರುತನ್ನು ರಹಸ್ಯವಾಗಿಡಲಾಗುವುದು, ಇಲಾಖೆಯೂ ಯಾವುದೇ ಕಾರಣಕ್ಕೂ ಮಾಹಿತಿದಾರನ ವಿವರವನ್ನು ಎಲ್ಲಿಯೂ ಬಹಿರಂಗಗೊಳಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇನಾಮಿ ಆಸ್ತಿ ಹೊಂದಿರುವವರನ್ನು ಪತ್ತೆ ಹಚ್ಚುವುದು ಆದಾಯ ತೆರಿಗೆ ಇಲಾಖೆ ಹಾಗೂ ಆಡಳಿತ ವಿಭಾಗಕ್ಕೆ ತುಂಬಾ ಕಷ್ಟದಾಯಕವಾದ ಕೆಲಸವಾಗಿದೆ. ಹೀಗಾಗಿ ನಾವು ಮಾಹಿತಿದಾರರಿಂದ ವಿವರ ಪಡೆದರೇ ಕೆಲಸ ವೇಗವಾಗಿ ಪರಿಣಾಮಕಾರಿಯಾಗಿ ಮುಗಿಯುತ್ತದೆ, ಒಂದು ವೇಳೆ ನಾವು ಮಾಹಿತಿದಾರರಿಗೆ ಸೂಕ್ತ ಬಹುಮಾನ ನೀಡಿದರೇ, ದೇಶಾದ್ಯಂತ ಬೇನಾಮಿ ಆಸ್ತಿ ಹೊಂದಿರುವವರನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದು, ಸದ್ಯ ಪ್ರಸ್ತಾವನೆ ಹಣಕಾಸು ಇಲಾಖೆ ಬಳಿಯಿದೆ, ಒಂದು ಬಾರಿ ಹಣಕಾಸು ಇಲಾಖೆಯಿಂದ ಅಮುಮೋದನೆ ಪಡೆದು, ಹಣಕಾಸು ಸಚಿವರಿಂದ ಒಪ್ಪಿಗೆಯಾದರೇ, ಕೇಂದ್ರ ತೆರಿಗೆ ನಿರ್ದೇಶನ ಇಲಾಖೆ ಯೋಜನೆಯನ್ನು ಘೋಷಿಸುತ್ತದೆ. ಈ ಯೋಜನೆ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
Comments