ಗಡಿಯಲ್ಲಿ ಪಾಕ್ ಅಪ್ರಚೋದಿತ ಆಕ್ರಮಣ : ಯೋಧರಿಗೆ ಗಾಯ

ಜಮ್ಮುವಿನ ಸಾಂಬಾ ಮತ್ತು ಪೂಂಚ್ ಜಿಲ್ಲೆಗಳಲ್ಲಿರುವ ಸೇನಾ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಸೇನೆ ಕಳೆದ ರಾತ್ರಿಯಿಂದಲೂ ಅಪ್ರಚೋದಿತ ಗುಂಡು ಹಾಗೂ ಶೆಲ್ ಗಳಿಂದ ದಾಳಿ ನಡೆಸುತ್ತಿದ್ದು, ಪರಿಣಾಮ ಇಬ್ಬರು ಬಿಎಸ್‌ಎಫ್ ಯೋಧರು ಹಾಗೂ ಐವರು ನಾಗರೀಕರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮ್ಮುವಿನ ಅಂತರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಎಡೆಬಿಡದೆ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದರಿಂದ ಗಡಿಯಲ್ಲಿರುವ ನೂರಾರು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಅರ್ನಿಯಾ ಸೆಕ್ಟರ್, ಆರ್'ಎಸ್ ಪುರ ಮತ್ತು ರಾಮ್ಗಢ್ ಸೆಕ್ಟರ್ ಸೇರದಂತೆ ಜಮ್ಮುವಿನ ಅಂತರಾಷ್ಟ್ರೀಯ ಗಡಿ ಹಾಗೂ ಸಾಂಬಾ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆಯಿಂದಲೇ 20 ಗ್ರಾಮಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದೆ. ಪರಿಣಾಮ ಆರ್'ಎಸ್ ಪುರ ಸೆಕ್ಟರ್ ಬಳಿಯಿರುವ ಸತೊವಾಲಿ ಗ್ರಾಮದಲ್ಲಿ ಮೂವರು ನಾಗರೀಕರು, ಅರ್ನಿಯಾ ಸೆಕ್ಟರ್ ಬಳಿಯಿರುವ ತ್ರೆವಾದಲ್ಲಿ ಓರ್ವ ನಾಗರೀಕ, ಪೂಂಜ್ ಸೆಕ್ಟರ್ ಬಳಿ 8 ವರ್ಷದ ಬಾಲಕ ಗಾಯಗೊಂಡಿದ್ದರು. ಗಾಯಗೊಂಡ ಎಲ್ಲಾ ನಾಗರೀಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾಮ್ಗಢ್ ಸೆಕ್ಟರ್ ನ ಸಾಂಬಾ ಬಳಿ ಇಬ್ಬರು ಬಿಎಸ್‌ಎಫ್ ಯೋಧರಿಗೆ ಗಾಯಗಳಾಗಿವೆ ಎಂದು ಅಧಿಕಾರಿ ಹೇಳಿದ್ದಾರೆ.
Comments