ಐಟಿ ದಾಳಿಗೆ ಕೇಂದ್ರವನ್ನು ದೂರಿದ ಕಾಂಗ್ರೆಸ್-ಜೆಡಿಎಸ್ ಪಕ್ಷವು ಈಗ ಏನು ಹೇಳುತ್ತಾರೆ?

ಬೆಂಗಳೂರು : ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಐಟಿ ದಾಳಿ ನಡೆಸುತ್ತಿದೆ ಎಂದು ಟೀಕಿಸುತ್ತಿದ್ದವರು ಈಗ ಏನು ಹೇಳುತ್ತಾರೆ ಎಂಬ ಕುತೂಹಲ ಮೂಡಿದೆ.
ಗುರುವಾರ ಬೆಳಗ್ಗೆಯೇ ಕೃಷ್ಣ ಅವರ ಅಳಿಯ ಸಿದ್ಧಾರ್ಥ ಹೆಗಡೆ ಅವರ ಮನೆ, ಕಚೇರಿ ಹಾಗೂ ಅವರ ಒಡೆತನದ ಎಬಿಸಿ ಕಂಪನಿ, ಕಾಫಿ ಡೇ ಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಚಿಕ್ಕಮಂಗಳೂರು ಸೇರಿದಂತೆ ಹೊಟೇಲ್ ಸೆರಾಯ್, ಮೂಡಿಗೆರೆಯಲ್ಲಿ ಸಿದ್ಧಾರ್ಥ್ ತಂದೆ ಗಂಗಯ್ಯ ಹೆಗಡಿ ಅವರ ಮಾಲೀಕತ್ವದ ಕಾಫಿ ಎಸ್ಟೇಟ್ ಮೇಲೂ ದಾಳಿ ನಡೆಸಲಾಗಿದೆ. 40 ಕ್ಕೂ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳು ವಿವಿಧ ತಂಡಗಳಾಗಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತ ರಜನೀಶ್ ಅವರ ಮನೆ ಮೇಲೆ ನಡೆದ ಐಟಿ ದಾಳಿಯ ಮುಂದುವರಿದ ಭಾಗ ಇದಾಗಿದೆ ಎಂದೂ ಹೇಳಲಾಗುತ್ತಿದೆ. ಅಲ್ಲದೆ ಕಾರ್ತಿ ಚಿದಂಬರಂ ಅವರ ಪ್ರಕರಣದ ತನಿಖೆ ವೇಲೆ ಸಿಕ್ಕ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ ಎಂಬ ವರದಿಗಳು ಬಂದಿವೆ.
ರಾಜ್ಯದಲ್ಲಿ ಎಂಎಲ್ ಸಿ ಗೋವಿಂದರಾಜು, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಇಂಧನ ಸಚಿವ ಡಿ.ಕೆ ಶಿವಕುಮಾರ್, ಕೇಂದ್ರದಲ್ಲಿ ಕಾರ್ತಿ ಚಿದಂಬರಂ ಹಾಗೂ ಇತರೆ ಕಾಂಗ್ರೆಸ್ ನಾಯಕರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿದ ನಂತರ ರಾಷ್ಟ್ರಮಟ್ಟದಲ್ಲೂ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದವು.
ಐಟಿ ಇಲಾಖೆಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕಾಂಗ್ರೆಸ್ ನಾಯಕರ ಮೇಲೆ ಉದ್ದೇಶ ಪೂರ್ವಕವಾಗಿ ದಾಳಿ ನಡೆಸಲಾಗುತ್ತಿದೆ. ಕಾಂಗ್ರೆಸ್ ನಾಯಕರ ಮನೆ ಮೇಲೆ ಏಕೆ ಐಟಿ ದಾಳಿ? ಬಿಜೆಪಿ ನಾಯಕರ ಮನೆ ಮೇಲೆ ಯಾಕಿಲ್ಲ ಎಂದು ಪ್ರಶ್ನಿಸಿದ್ದರು. ಈಗ ಐಟಿ ಅಧಿಕಾರಿಗಳು ಬಿಜೆಪಿ ನಾಯಕ ಎಸ್.ಎಂ ಕೃಷ್ಣ ಅವರ ಅಳಿಯನ ಮೇಲೆ ದಾಳಿ ನಡೆಸಿದ್ದಾರೆ.
Comments