ಆಸ್ತಿ ಕುರಿತು ಸಚಿವರಿಗೆ ಪ್ರಧಾನಿ ಮೋದಿ ಮಾಡಿದ ತಾಕೀತ್ ಏನು?
ನವದೆಹಲಿ : ಕೇಂದ್ರ ಮಂತ್ರಿ ಮಂಡಲದ 92 ಸಚಿವರಲ್ಲಿ ಕೇವಲ 15 ಸಚಿವರು ಮಾತ್ರ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಮೋದಿಯವರ ಸೂಚನೆಯ ಪ್ರಕಾರ, ಈ ವರ್ಷದ ಆಸ್ತಿ ಮೌಲ್ಯವನ್ನು ಆಗಸ್ಟ್ 31ರೊಳಗೆ ಘೋಷಿಸಿಕೊಳ್ಳಬೇಕಿತ್ತು. ಆದರೆ, ಹಲವಾರು ಮಂದಿ ಈ ಶಿಷ್ಟಾಚಾರ ಪಾಲಿಸುವುದರಿಂದ ಹಿಂದೆ ಸರಿದಿದ್ದಾರೆ.
ಪ್ರಧಾನಿಯಾಗಿ ಅಧಿಕಾರ ವಹಿಸಿದಾಗಿನಿಂದಲೂ ಪ್ರತಿ ವರ್ಷ ತಮ್ಮ ಆಸ್ತಿ ಘೋಷಣೆ ಮಾಡುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮಂತ್ರಿ ಮಂಡಲದ ಎಲ್ಲಾ ಸಚಿವರಿಗೂ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದ್ದರು.
ಅಧಿಕಾರ ಸ್ವೀಕರಿಸಿದ ಹೊಸತರಲ್ಲೇ ಮೋದಿ ಈ ರೀತಿ ತಾಕೀತು ಮಾಡಿದ್ದರು. ಪ್ರತಿ ವರ್ಷ ಆಗಸ್ಟ್ 31ರೊಳಗೆ ಹೀಗೆ ಆಸ್ತಿ ಘೋಷಣೆ ಮಾಡುವಂತೆ ಸೂಚಿಸಿದ್ದರು. ತಾವೂ ತಮ್ಮ ವೆಬ್ ಸೈಟ್ ನಲ್ಲಿ ತಮ್ಮ ಆಸ್ತಿ ಮೌಲ್ಯ 2 ಕೋಟಿ ರು. ಎಂದು ಖುದ್ದು ಮೋದಿಯವರೇ ಘೋಷಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿ ಸೇರಿದಂತೆ, ಸ್ಮೃತಿ ಇರಾನಿ, ಮನೇಕಾ ಗಾಂಧಿ, ಪಿಯೂಷ್ ಗೋಯೆಲ್, ಕಿರಣ್ ರಿಜಿಜು, ರವಿಶಂಕರ್ ಪ್ರಸಾದ್ ಮುಂತಾದವರು ತಮ್ಮ ಆಸ್ತಿಗಳ ಘೋಷಣೆ ಮಾಡಿದ್ದಾರೆ. ಆದರೆ, ಉಳಿದವರು ಇನ್ನೂ ಎಚ್ಚೆತ್ತುಕೊಂಡಿಲ್ಲ.
ಅತ್ತ ಹಣಕಾಸು ಸಚಿವಾಲಯ, ಸಚಿವರಷ್ಟೇ ಅಲ್ಲ, ಸಚಿವರ ಕುಟುಂಬ ಸದಸ್ಯರ ಆಸ್ತಿ ಮೌಲ್ಯಗಳನ್ನೂ ಘೋಷಿಸಬೇಕೆಂದು ಪದೇ ಪದೇ ತಾಕೀತು ಮಾಡುತ್ತಲೇ ಬಂದಿದೆ. ಆದರೆ, ಇದ್ಯಾವುದೂ ಅಷ್ಟಾಗಿ ಕಾರ್ಯಕ್ಕೆ ಬಂದಿಲ್ಲ. ಹೀಗೆ, ಮಾತು ಕೇಳದವರಿಗೆ, ಮೋದಿ ಯಾವಾಗ, ಯಾವ ರೀತಿ ಬಿಸಿ ಮುಟ್ಟಿಸುತ್ತಾರೋ ಕಾದು ನೋಡಬೇಕಿದೆ.
Comments