ಜಗದ್ವಿಖ್ಯಾತ ನಾಡಹಬ್ಬ ದಸರಾಗೆ ಕ್ಷಣಗಣನೆ ಆರಂಭ.....

ನವರಾತ್ರಿ ಎಂತಲೂ ಕರೆಯುವ ದಸರಾ ಹಬ್ಬವು ದೇಶಾದ್ಯಂತ ಆಚರಿಸುವ ಸಡಗರದ ಹಬ್ಬ. ಹತ್ತು ದಿನಗಳ ವಿಜೃಂಭಣೆಯಿಂದ ವಿಜಯದಶಮಿ ಐತಿಹಾಸಿಕ ಜಂಬು ಸವಾರಿಯೊಂದಿಗೆ ಉತ್ಸವಕ್ಕೆ ತೆರೆ ಬೀಳುತ್ತದೆ. 10 ದಿನಗಳ ಕಾಲ ನಡೆಯುವ ದಸರಾ ಉತ್ಸವಕ್ಕೆ ನಾಳೆ ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ 8.45ಕ್ಕೆ ತುಲಾ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ನವರಾತ್ರಿಗೆ ಚಾಲನೆ ನೀಡಲಾಗುವುದು.
ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಅವರು ಚಾಮುಂಡಿ ಬೆಟ್ಟದಲ್ಲಿ ದಸರಾಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ , ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ.ಸಾಂಸ್ಕ್ರತಿಕವಾಗಿ, ಸಾಮಾಜಿಕವಾಗಿ ಅತ್ಯಂತ ವೇಗವಾಗಿ ಬೆಳೆದ ಪ್ರಾಂತ್ಯ ಮೈಸೂರು ರಾಜ್ಯ, ವಿಜಯನಗರ ಅರಸರ ಕಾಲದ ದಸರಾ ಆಚರಣೆಯನ್ನು ಮೈಸೂರು ಅರಸರು ಸಂಭ್ರಮದಿಂದ ಆಚರಿಸಿಕೊಂಡು ಬಂದಿದ್ದಾರೆ. ದಸರಾ ಉತ್ಸವ ಹತ್ತು ದಿನಗಳ ಸುದೀರ್ಘ ಹಬ್ಬ. ಈ ಹಬ್ಬವನ್ನು ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ವಿಜಯ ದಿನದ ಸಂಕೇತವಾಗಿ ಆಚರಿಸಿಕೊಂಡು ಬರಲಾಗುತ್ತದೆ. ದಸರಾ ದಿನಗಳಂದು ಅರಮನೆಯ ದರ್ಬಾರ್ ಹಾಲ್‍ನಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು, ವಿಜಯದಶಮಿಯಂದು ತಾಯಿ ಚಾಮುಂಡಿ ದೇವಿಯನ್ನು ಹೊತ್ತ ಅರ್ಜುನ ಇತರ 10-12 ಆನೆಗಳೊಂದಿಗೆ ವಿವಿಧ ಜಾನಪದ ಕಲಾತಂಡಗಳು, ನಾಡಿನ ಸಂಸ್ಕ್ರತಿ, ಅಭಿವೃದ್ಧಿ ಸಂಕೇತಿಸುವ ಸ್ತಬ್ಧಚಿತ್ರಗಳು, ವಾದಮೃದಂಗಗಳು, ಪೊಲೀಸ್ ಹಾಗೂ ಸೈನಿಕ ದಳದೊಂದಿಗೆ ನಗರದ ರಾಜಬೀದಿಗಳಲ್ಲಿ ನಡೆಯುವುದನ್ನು ನೋಡಿದರೆ ಹಿಂದಿನ ಗತವೈಭವ ಕಣ್ಣ ಮುಂದೆ ಪ್ರತ್ಯಕ್ಷವಾಗುತ್ತದೆ.
Comments