ಅಕ್ಟೋಬರ್ 1ರಿಂದ ಮೊಬೈಲ್ ಕರೆ ದರ ಇಳಿಮುಖವಾಗಲಿದೆ
ನವದೆಹಲಿ: ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ಮಾಡುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ವಿವಿಧ ಟೆಲಿಕಾಂ ಸಂಸ್ಥೆಗಳಿಗೆ ತಾನು ವಿಧಿಸುತ್ತಿದ್ದ 'ಅಂತರ ಸಂಪರ್ಕ ಬಳಕೆ ಶುಲ್ಕ'ವನ್ನು (ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜಸ್- ಐಯುಸಿ) ಶೇ. 57ರಷ್ಟು ಇಳಿಸಿದೆ.
ಇದರಿಂದಾಗಿ, ಪ್ರತಿ ಕರೆಗೆ ಈಗ ಚಾಲ್ತಿಯಲ್ಲಿರುವ 14 ಪೈಸೆ ಐಯುಸಿ ದರ, 6 ಪೈಸೆಗೆ ಇಳಿಯಲಿದೆ. ಮುಂದಿನ ತಿಂಗಳ 1ನೇ ದಿನಾಂಕದಿಂದ (ಅ. 1) ಈ ಹೊಸ ದರ ಜಾರಿಗೆ ಬರಲಿದೆ. ಇದರಿಂದಾಗಿ, ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಹೇಳಲಾಗಿದೆ.
ಟ್ರಾಯ್ ನ ಈ ನಿರ್ಧಾರದಿಂದಾಗಿ, ವಿವಿಧ ಮೊಬೈಲ್ ಸೇವಾ ಕಂಪನಿಗಳ ದರಗಳೂ ಇಳಿಮುಖವಾಗಲಿದ್ದು, ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ.ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಟ್ರಾಯ್, ಐಯುಸಿ ದರದ ಇಳಿಕೆಯಿಂದಾಗಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚು ಸ್ಪರ್ಧೆಯ ವಾತಾವರಣ ತರಲಿದೆ. ಗ್ರಾಹಕರಿಗೂ ಇದು ಅನುಕೂಲವಾಗಲಿದೆ ಎಂದು ಹೇಳಿದೆ.
ಅಂದಹಾಗೆ, ಟ್ರಾಯ್ ನ ನಿರ್ಧಾರ ಇಷ್ಟಕ್ಕೇ ನಿಲ್ಲುವುದಿಲ್ಲವಂತೆ, ಮುಂಬರುವ ದಿನಗಳಲ್ಲಿ ಐಯುಸಿ ದರವನ್ನು ಶೂನ್ಯಕ್ಕಿಳಿಸುವ ಪ್ರಸ್ತಾವನೆ ಟ್ರಾಯ್ ಮುಂದೆಯಂತೆ. 2022ರ ಜನವರಿ 1ರ ವೇಳೆಗೆ ಐಯುಸಿ ದರವನ್ನು ಶೂನ್ಯಕ್ಕಿಳಿಸಲು ಆಲೋಚಿಸಲಾಗಿದೆಯಂತೆ.
Comments