ಸಾಮೂಹಿಕ ರ‍್ಯಾಗಿಂಗ್ ಸಂಬಂಧ 54 ವಿದ್ಯಾರ್ಥಿಗಳು ಅಮಾನತು

2009ರಲ್ಲೇ ರ‍್ಯಾಗಿಂಗ್ ವಿರೋಧಿ ಕಾನೂನುಗಳು ಜಾರಿಯಾಗಿದ್ದರೂ ರ‍್ಯಾಗಿಂಗ್ ಅವ್ಯಾಹತವಾಗಿ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಿರಿಯ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಂಧ್ರಪ್ರದೇಶ ಐಟಿ ವಿಶ್ವವಿದ್ಯಾಲಯದಿಂದ ಅಮಾನತು ಮಾಡಲಾಗಿದೆ.
ಆ.29ರಂದು ರ‍್ಯಾಗಿಂಗ್ ನಡೆದಿರುವುದು ತನಿಖೆಯ ನಂತರ ಖಚಿತಪಟ್ಟಿದೆ. ಈ ಸಂಬಂಧ ಕೃಷ್ಣ ಜಿಲ್ಲೆಯ ನುಜ್ವಿದ್ ನಲ್ಲಿರುವ ರಾಜೀವ್ ಗಾಂಧಿ ತಂತ್ರಜ್ಞಾನ ವಿವಿಯ 54 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ವಿವಿಯ ರಿಜಿಸ್ಟ್ರಾರ್ ವಿ.ವೆಂಕಟ್ ದಾಸ್ ಮಾತನಾಡಿ, ಒಟ್ಟು 15 ವಿದ್ಯಾರ್ಥಿಗಳನ್ನು ಒಂದು ವರ್ಷದವರೆಗೆ ತರಗತಿಗಳಿಗೆ ಬರದಂತೆ ಮಾಡಲಾಗಿದೆ. ಅದರಲ್ಲಿ 6 ಮಂದಿಗೆ ವಾರ್ಷಿಕ ಪರಿಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ರ‍್ಯಾಗಿಂಗ್ ಸಂಬಂಧ 13 ವಿದ್ಯಾರ್ಥಿಗಳನ್ನು ನವೆಂಬರ್ ವರೆಗೆ ಅಮಾನತು ಮಾದಲಾಗಿದೆ, ಉಳಿದ 24 ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯ ದಿಂದ ಹೊರಕಳುಹಿಸಲಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಬಳಿಕ ಹಿರಿಯ ವಿದ್ಯಾರ್ಥಿಗಳು ದೈಹಿಕ ಶಿಕ್ಷೆ ನೀಡಿದ್ದಾರೆ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಶಿಸ್ತು ಸಮಿತಿಯ ಮುಂದೆ ಹೇಳಿಕೊಂಡಿದ್ದಾರೆ. ಅಮಾನತುಗೊಂಡಿರುವ ವಿದ್ಯಾರ್ಥಿಗಳು ಸಾಫ್ಟ್ವೇರ್ ಇಂಜಿನಿಯರಿಂಗ್ ವಿಷಯದ 3 ಮತ್ತು 4ನೇ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ. ತನಿಖಾ ವರದಿ ಬಂದ ನಂತರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವಿಯ ಆಡಳಿತ ಮಂಡಳಿ ತಿಳಿಸಿದೆ.
Comments