ಅಂಬಾರಿ ಹೊರಲು ತಯಾರಿದ್ದಾನಂತೆ ಅರ್ಜುನ



ಮೊದಲ ದಿನವೇ ಮರದ ಅಂಬಾರಿಯನ್ನು ಹೊತ್ತ ಅರ್ಜುನ ಸುಮಾರು ಆರು ಕಿಲೋ ಮೀಟರ್ ದೂರವನ್ನು 1ಘಂಟೆ 20 ನಿಮಿಷದಲ್ಲಿ ಬನ್ನಿಮಂಟಪ ತಲುಪಿದ್ದಾನೆ. ಹೀಗಾಗಿ ಜಂಬೂಸವಾರಿ ಯಾವುದೇ ಆತಂಕವಿಲ್ಲದೆ ಅರ್ಜುನ ಚಿನ್ನದ ಅಂಬಾರಿ ಹೊರುತ್ತಾನೆ ಎಂಬುದು ಸಾಬೀತಾಗಿದೆ. ಇನ್ನು ಮುಂದೆ ಪ್ರತಿದಿನ ಬೆಳಿಗ್ಗೆ ಮರದ ಅಂಬಾರಿಯನ್ನು ಅರ್ಜುನನ ಬೆನ್ನಿಗೆ ಕಟ್ಟಿ ತಾಲೀಮು ನಡೆಯಲಿದೆ.
ಇದನ್ನು ನೈಪುಣ್ಯ ಹೊಂದಿದ ಮಾವುತರು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸುತ್ತಿದ್ದಾರೆ. ನಮ್ದಾ ಎಂದು ಕರೆಯುವ ಹೊದಿಕೆಯನ್ನು ಮೊದಲು ಆನೆಯ ಬೆನ್ನಿನ ಮೇಲೆ ಹೊದಿಸಲಾಗುತ್ತದೆ. ಅದರ ಮೇಲೆ ಮೆತ್ತನೆಯ ಹೊದಿಕೆಯಾದ ಗಾದಿ ಎಂದು ಕರೆಯುವ ಚೌಕಾಕಾರದ ದೊಡ್ಡ ಹೊರೆಯನ್ನು ಹೊರಿಸಲಾಗುತ್ತದೆ. ಈ ಗಾದಿಯ ತೂಕ ಸುಮಾರು 300 ಕೆ.ಜಿ ತೂಕ ಇರುತ್ತದೆ. ಇದನ್ನು ಸುಮಾರು 80 ರಿಂದ 90 ಅಡಿ ಉದ್ದದ ಹಗ್ಗದಿಂದ ಬಿಗಿಯಲಾಗುತ್ತದೆ. ಅದರ ಮೇಲೆ ಮತ್ತೊಂದು ಬಟ್ಟೆ (ಛಾಪು)ಯನ್ನು ಹೊದಿಸಲಾಗುತ್ತದೆ. ಇದರ ಮೇಲೆ ಕ್ರೇನ್ ಮೂಲಕ ಮರದ ಅಂಬಾರಿಯನ್ನಿರಿಸಿ ಆನೆಯ ಹಿಂಭಾಗದಿಂದ ದುಮುಚಿ ಎಂಬ ರಬ್ಬರ್ ಮತ್ತು ಆನೆಯ ಹೊಟ್ಟೆ ಭಾಗಕ್ಕೆ ಚೆಸ್ಟ್ ಲೆಗ್ ರಬ್ಬರ್ ಹಗ್ಗ ಬಿಗಿಯಲಾಗುತ್ತದೆ. ಆ ನಂತರ ಅರಮನೆ ಆವರಣದಿಂದ ಇತರೆ ಗಜಪಡೆಗಳೊಂದಿಗೆ ಬನ್ನಿಮಂಟಪದವರೆಗೆ ತಾಲೀಮು ನಡೆಯುತ್ತದೆ.
Comments