ಮದ್ಯದೊರೆ ವಿಜಯ ಮಲ್ಯಗೆ ಬ್ರಿಟನ್ನಲ್ಲೂ ಬೆಂಬಿಡದ ಕಂಟಕ

ವಿಜಯ ಮಲ್ಯ ಬ್ರಿಟನ್ ಹಾಗೂ ಇತರೆಡೆಗಳಲ್ಲಿ ನಡೆಸಿದ ಹಣ ವಂಚನೆ ಬಗ್ಗೆ ತನಿಖೆ ನಡೆಸಲು ಬ್ರಿಟನ್ ಸರ್ಕಾರ ನಿರ್ಧರಿಸಿದೆ. ಹಲವು ಕಂಪೆನಿಗಳ ಮೂಲಕ ಭಾರತದಿಂದ ಬ್ರಿಟನ್ ಗೆ ವಾಮಮಾರ್ಗದಲ್ಲಿ ಸಂಕೀರ್ಣ ಕಂಪೆನಿಗಳ ಜಾಲದ ಮೂಲಕ ಹಣವನ್ನು ಬ್ರಿಟನ್, ಸ್ವಿಡ್ಜರ್ಲೆಂಡ್ ಮತ್ತಿತರ ದೇಶಗಳಿಗೆ ರವಾನಿಸಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬ್ರಿಟಿಷ್ ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಮಲ್ಯನ ಗಡೀಪಾರಿಗೆ ಮನವಿ ಮಾಡಿರುವ ಅರ್ಜಿ ವೆಸ್ಟ್ಮಿನಿಸ್ಟರ್ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ರಿಟನ್ನಿನ ಗಂಭೀರ ವಂಚನೆ ಕಚೇರಿ (ಎಸ್‌ಎಫ್‌ಓ) ಮದ್ಯದೊರೆ ವಿಜಯ ಮಲ್ಯ ವಿರುದ್ಧ ತನಿಖೆ ಆರಂಭಿಸಲು ನಿರ್ಧರಿಸಿದೆ. ಇದರೊಂದಿಗೆ ವಿವಾದಾತ್ಮಕ ಉದ್ಯಮಿಗೆ ಮತ್ತೆ ಕಂಟಕ ಎದುರಾಗಿದೆ. ಬ್ರಿಟನ್ ಹಾಗೂ ಇತರೆಡೆಗಳಲ್ಲಿ ಮಲ್ಯ ನಡೆಸಿದ ಹಣ ವಂಚನೆ ಬಗ್ಗೆ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಮಲ್ಯನ ಸ್ಥಿರ ಹಾಗೂ ಚರಾಸ್ತಿಗಳ ಬಗ್ಗೆ, ಬ್ರಿಟನ್ನಿನ ಕಂಪೆನಿಗಳಲ್ಲಿ ಮಾಡಿದ ಹೂಡಿಕೆ ಮತ್ತು ಷೇರುಗಳ ಬಗ್ಗೆ ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ಈಗಾಗಲೇ ಮಹತ್ವದ ಮಾಹಿತಿಯನ್ನು ಕಲೆಹಾಕಲಾಗಿದೆ. ಹಣ ದುರುಪಯೋಗದಲ್ಲಿ ಬ್ರಿಟಿಷ್ ಕಂಪೆನಿಗಳೂ ಸೇರಿವೆಯೇ ಎಂಬ ಬಗ್ಗೆ ಸ್ವತಂತ್ರ ತನಿಖೆ ನಡೆಸಲಾಗುತ್ತಿದೆ ಎಂದು ಹಣಕಾಸು ತನಿಖಾ ಸಂಸ್ಥೆ ಸ್ಪಷ್ಟಪಡಿಸಿದೆ.
ಬ್ರಿಟನ್ ಅಧಿಕಾರಿಗಳು ಈ ಔಪಚಾರಿಕ ತನಿಖೆ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಸಿಬಿಐ ಹಾಗೂ ಕಾನೂನು ಜಾರಿ ನಿರ್ದೇಶನಾಲಯಗಳು ಮಲ್ಯನ ಹಣ ದುರುಪಯೋಗ ಆರೋಪದ ಬಗ್ಗೆ ಬ್ರಿಟನ್ಗೆ ಮಾಹಿತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
Comments