ಅರಣ್ಯ ಇಲಾಖೆಯ ಪಾಲಿನ ಆಸ್ತಿ ಅಭಿಮನ್ಯು
ಅಭಿಮನ್ಯು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬರುವ ಮುನ್ನ ಕೇರಳದಲ್ಲಿ ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿತ್ತು. ಈ ಆನೆ ಲಭ್ಯವಾಗದಿದ್ದಾಗ ಕಾರ್ಯಾಚರಣೆಯನ್ನೇ ಮುಂದೂಡಿದ್ದುಂಟು. ಎಷ್ಟೇ ಬಲಶಾಲಿಯಾಗಿರುವ ಆನೆಗಳನ್ನು ಸೆರೆ ಹಿಡಿಯುವ ತಾಕತ್ತು ಇದಕ್ಕಿದೆ. 100 ಕಾಡಾನೆಗಳನ್ನು ಸೆರೆ ಹಿಡಿದಿರುವ ಏಕೈಕ ಸಲಗವಿದು. ಮಾವುತ ವಸಂತ ಚೆನ್ನಾಗಿ ತರಬೇತಿ ನೀಡಿದ್ದಾರೆ ಎಂದು ಅರಣ್ಯ ಉಪಸಂರಕ್ಷಣಾಧಿಕಾರಿ (ವನ್ಯಜೀವಿ) ವಿ.ಏಡುಕುಂಡಲ ತಿಳಿಸಿದರು.
ಕಾರ್ಯಾಚರಣೆ ವೇಳೆ ಆನೆಗಳ ನಡುವೆ ದೊಡ್ಡ ಕಾಳಗವೇ ನಡೆಯುತ್ತದೆ. ಕಾಡಾನೆಗಳ ಅಬ್ಬರಕ್ಕೆ ಸಾಕಾನೆಗಳು ಒಮ್ಮೆಲೇ ಹಿಂದಿರುಗಿ ಓಡುತ್ತವೆ. ಆದರೆ. ಅಭಿಮನ್ಯು ಒಂದು ಹೆಜ್ಜೆಯೂ ಹಿಂದಿಡುವುದಿಲ್ಲ. ಕೋರೆಯಲ್ಲಿ ತಿವಿದು ಕೆಡವಿ ಬಿಡುತ್ತದೆ. ಮೇಲೆ ಕುಳಿತ ನಮಗೂ ರಕ್ಷಣೆ ನೀಡುತ್ತದೆ. ಕಾಡಾನೆ, ಹುಲಿಗಳ ಜಾಡು ಹಿಡಿದು ಬೆನ್ನಟ್ಟುತ್ತದೆ ಎಂದು ಮಾವುತ ವಸಂತ ಹೇಳುತ್ತಾರೆ. ಸಂಕಷ್ಟಕ್ಕೆ ಸಿಲುಕಿದ ಆನೆಗಳನ್ನು ರಕ್ಷಿಸುವ ಕೆಲಸಕ್ಕೂ ಬಳಸಿಕೊಳ್ಳಲಾಗುತ್ತಿದೆ. ಗುಂಡಿಗೆ ಬಿದ್ದ, ಕೆಸರಿನಲ್ಲಿ ಸಿಲುಕಿದ ನೂರಾರು ಆನೆಗಳನ್ನು ರಕ್ಷಿಸಿದೆ. 51 ವರ್ಷ ವಯಸ್ಸಿನ ಈ ಸಲಗವನ್ನು 1977ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಳ್ಳ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಆರಂಭದಲ್ಲಿ ಮಾವುತ ಸಣ್ಣಪ್ಪ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಈಗ ಅವರ ಪುತ್ರ ವಸಂತ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
Comments