ಸಿಎಂ ಸಿದ್ದರಾಮಯ್ಯ ವಿರುಧ್ಧ ಗುಡುಗಿದ ಮಾಜಿ ಪ್ರಧಾನಿ ದೇವೇಗೌಡರು
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನಾ ನಿರತ ಎಂಎಲ್ಸಿಗಳನ್ನು ಭೇಟಿ ಮಾಡಿದರು. ಶೈಕ್ಷಣಿಕ ಸಮಸ್ಯೆ ಬಗೆಹರಿಸುವಂತೆ ಕಳೆದ 8 ದಿನಗಳಿಂದ ಎಂಎಲ್ಸಿಗಳು ಇಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಅಧಿಕಾರ ಶಾಶ್ವತ ಅಲ್ಲ, ಸಿಎಂ ಅವರ ವರ್ತನೆಯನ್ನು ಜನ ಒಪ್ಪುವುದಿಲ್ಲ. ವಿಧಾನಸೌಧಕ್ಕೆ ಅನೇಕ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ, ಸಿಎಂ ಸೌಜನ್ಯ ಕಳೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ದೇವೇಗೌಡ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸರಕಾರಕ್ಕೆ ಕಠಿಣ ಮನಸ್ಸಿದೆ. ಸರಕಾರದ ನಿಲುವು ರಾಜ್ಯದ ಜನಕ್ಕೆ ಗೊತ್ತಾಗುತ್ತದೆ. ಸಮಸ್ಯೆ ಬಂದಾಗ ಸಂಧಾನದ ಬಾಗಿಲು ಮುಚ್ಚಬಾರದು. 15 ನೇ ತಾರೀಖಿನ ಸಭೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಪ್ರಾದೇಶಿಕ ಪಕ್ಷವಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ. ರಾಷ್ಟ್ರೀಯ ಪಕ್ಷಗಳ ನಿಲುವಿನ ಬಗ್ಗೆ ನಾನೇನು ಮಾತನಾಡುವುದಿಲ್ಲ. ನಮ್ಮವರು ಹೋರಾಟಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಸಿಎಂ ಸಮಸ್ಯೆ ಪರಿಹಾರ ಮಾಡಲೇಬೇಕು ಎಂದು ಆಗ್ರಹಿಸಿದರು.
ಪಕ್ಷಾತೀತವಾಗಿ ಎಂಎಲ್‌ಸಿಗಳು ಹೋರಾಟ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಸದನದ ಒಳಗೆ ,ಹೊರಗೆ ಹೋರಾಟ ಮಾಡುತ್ತಿದ್ದಾರೆ. ಆದರೆ ಸರಕಾರದಿಂದ ಯಾವುದೇ ಪ್ರಯೋಜನ ಆಗಿಲ್ಲ. ವಿಧಾನಸೌಧದಲ್ಲೇ ಧರಣಿ ಮಾಡಿದರೂ ಯಾವ ಸಚಿವರು ಕೂಡ ಬಂದಿಲ್ಲ. ಇದು ಸರಕಾರಕ್ಕೆ ಶೋಭೆ ತರುವುದಿಲ್ಲ. ಸಿಎಂ ಯಾಕೆ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವೋ ಗೊತ್ತಿಲ್ಲ. ಸರಕಾರ ಯಾಕೆ ಇಷ್ಡು ಕಠೋರ ನಿರ್ಧಾರ ತೆಗೆದುಕೊಂಡಿದೆಯೋ ಗೊತ್ತಿಲ್ಲ. 15 ರಂದು ಸಭೆ ಕರೆದಿದ್ದು, ಅಲ್ಲಿಗೆ ಅವರು ಬರಲಿ ಅನ್ನುವ ಹಠ ಸಿಎಂಗೆ ಇರಬಹುದು. 15ರ ಸಭೆಯಲ್ಲಿ ಎಲ್ಲ ಸಮಸ್ಯೆ ಪರಿಹಾರ ಮಾಡಬೇಕು ಎಂದು ದೇವೇಗೌಡ ಒತ್ತಾಯಿಸಿದ್ದಾರೆ.
Comments