ವಿಶೇಷ ಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ವಿತರಣೆ

11 Sep 2017 3:36 PM | General
806 Report

ಬೆಂಗಳೂರು : 70ಕ್ಕೂ ಹೆಚ್ಚು ವಿಶೇಷಚೇತನರ ಸಮೀಕ್ಷೆ ಮಾಡಿ ಗುರುತಿಸಲು ನಿರ್ಧರಿಸಲಾಗಿದ್ದು, ಮುಂದಿನ 3 ವರ್ಷಗಳಲ್ಲಿ ಗುರುತಿಸಲ್ಪಡುವ ಎಲ್ಲರಿಗೂ ದ್ವಿಚಕ್ರವಾಹನಗಳನ್ನು ವಿತರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದ ಪೂರ್ವಭಾಗದ ಬೃಹತ್ ಮೆಟ್ಟಿಲುಗಳ ಬಳಿ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶೇಷಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.

ಕಳೆದ 2 ವರ್ಷಗಳಿಂದ ವಿಶೇಷಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿಲ್ಲ. ಒಂದು ವರ್ಷ ಟೆಂಡರ್‍ನಲ್ಲಿ ತಾಂತ್ರಿಕ ಸಮಸ್ಯೆಗಳಿದ್ದು, ಮತ್ತೊಂದು ವರ್ಷ ಕೇಂದ್ರ ಸರ್ಕಾರ ವಾಹನದ ಮಾದರಿಯನ್ನು ಬದಲಾವಣೆ ಮಾಡಿತು. ಹೀಗಾಗಿ ದ್ವಿಚಕ್ರ ವಾಹನಗಳ ವಿತರಣೆಯಲ್ಲಿ ವಿಳಂಬವಾಯಿತು.

2017-18ನೆ ಸಾಲಿನಲ್ಲಿ 4 ಸಾವಿರ ವಾಹನಗಳನ್ನು ವಿತರಿಸುವ ಗುರಿ ಹೊಂದಿದ್ದು, ಇದನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಶೇ.75ರಷ್ಟು ವಿಶೇಷಚೇತನರನ್ನು ಗುರುತಿಸಲು ರಾಜ್ಯಾದ್ಯಂತ ಸಮಗ್ರ ಸರ್ವೆ ಮಾಡಲು ಸೂಚಿಸಲಾಗಿದೆ. ಸರ್ವೆಯನ್ನು ಗುರುತಿಸಿರುವವರಿಗೆ 3 ವರ್ಷದೊಳಗೆ ವಾಹನಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

2013-14ರಲ್ಲಿ ಈ ಇಲಾಖೆಗೆ 647ಕೋಟಿ ರೂ. ಅನುದಾನವಿದ್ದು, ಈ ವರ್ಷ 1074 ಕೋಟಿ ಏರಿಕೆಯಾಗಿದೆ. ವಿಶೇಷಚೇತನರು ಸ್ವಾವಲಂಬಿಗಳಾಗಿ ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಬೇಕು. ಇದು ನಮ್ಮ ಸರ್ಕಾರದ ಗುರಿಯಾಗಿದೆ. ಅದಕ್ಕಾಗಿ ಸರ್ಕಾರ ನಾನಾ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಉದ್ಯೋಗದಲ್ಲಿ ಮೀಸಲಾತಿ, ವಿಶೇಷಚೇತನರನ್ನು ವಿವಾಹವಾಗುವವರಿಗೆ 50 ಸಾವಿರ ಪ್ರೋತ್ಸಾಹಧನ ಸೇರಿದಂತೆ ಹಲವಾರು ಯೋಜನೆಗಳನ್ನು ನೀಡಲಾಗುವುದು ಎಂದು ಹೇಳಿದರು.

Courtesy: eesanje

Comments