ಬಿಜೆಪಿ ವಿರುದ್ಧ ಹರಿಹಾಯ್ದಿದ ಸಿದ್ದರಾಮಯ್ಯ

ಮೈಸೂರು: ಬೆಂಗಳೂರಿನಲ್ಲಿ ಕಳೆದೊಂದು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಂಟಾಗಿರುವ ಪ್ರವಾಹ ಸಂಬಂಧಿ ತೊಂದರೆಗಳಿಗೆ ರಾಜ್ಯ ಸರ್ಕಾರವನ್ನು ದೂರುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರು ನಗರದ ಅನೇಕ ಮನೆಗಳಿಗೆ ನೀರು ನುಗ್ಗಿದ್ದು ಮತ್ತು ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದಿರುವ ಕುರಿತು ಕೇಂದ್ರ ಸಚಿವ ಹೆಚ್.ಎನ್.ಅನಂತಕುಮಾರ್, ರಾಜ್ಯ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಆಪಾದಿಸಿದ್ದರು. ಈ ಬಗ್ಗೆ ನಿನ್ನೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿನ ಬಿಜೆಪಿ ಸರ್ಕಾರ ಒತ್ತುವರಿಗಳ್ನು ತೆರವುಗೊಳಿಸಿದ್ದರೆ ಮತ್ತು ಮೂಲಭೂತ ಸೌಕರ್ಯಗಳನ್ನು ಸುಧಾರಿಸಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಮಳೆ ಸಂಬಂಧಿ ತೊಂದರೆಗಳು ಜನರಿಗೆ ಬರಬಾರದು ಎಂದು ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡಿತ್ತು. ಬೆಂಗಳೂರು ನಗರದಲ್ಲಿ 800 ಕಿಲೋ ಮೀಟರ್ ವರೆಗೆ ಒಳಚರಂಡಿಗಳಿವೆ.ಸರ್ಕಾರ 400 ಎಕರೆ ಒತ್ತುವರಿಯನ್ನು ತೆರವುಗೊಳಿಸಿದೆ. ನಗರದಾದ್ಯಂತ ಒತ್ತುವರಿಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಚರಂಡಿ ಮತ್ತು ಟ್ಯಾಂಕ್ ಗಳನ್ನು ತೆಗೆದುಹಾಕಲು ಹಣ ಕೂಡ ಒದಗಿಸಲಾಗಿದೆ ಎಂದರು.
ಮೊನ್ನೆ ಬೆಂಗಳೂರು ಮಳೆಗೆ ನಾಲ್ವರು ಮೃತಪಟ್ಟ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸರ್ಕಾರ ಅವರ ಕುಟುಂಬದವರಿಗೆ ಪರಿಹಾರ ಒದಗಿಸಿದೆ. ನಗರದಾದ್ಯಂತ ಹಳೆಯ ಮರಗಳನ್ನು ಕಡಿದುಹಾಕುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಅವಧಿಗೆ ಪೂರ್ವ ಚುನಾವಣೆ ರಾಜ್ಯದಲ್ಲಿ ನಡೆಯುವುದಿಲ್ಲ. ನಿಗದಿಯಂತೆ ಏಪ್ರಿಲ್-ಮೇ ತಿಂಗಳಿನಲ್ಲಿಯೇ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
Comments