ಇನ್ನೆರಡು ದಿನಗಳಲ್ಲಿ ಸಾಕ್ಷಿ ಸಮೇತ ಸಿಎಂ, ಸಚಿವರ ಕರ್ಮಕಾಂಡ ಬಹಿರಂಗಪಡಿಸುತ್ತೇನೆ : ಬಿಎಸ್ವೈ

ತುಮಕೂರು : ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವ ಭ್ರಷ್ಟಾಚಾರದ ಕರ್ಮಕಾಂಡವನ್ನು ಸಾಕ್ಷಿ ಸಮೇತ ಬಹಿರಂಗ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ದಾಖಲೆಗಳನ್ನು ಇಂದು ಅಥವಾ ನಾಳೆ ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಇನ್ನೂ ಕೆಲವು ಸೂಕ್ತ ದಾಖಲೆಗಳನ್ನು ಸಂಗ್ರಹಿಸುತ್ತಿರುವುದರಿಂದ ಇನ್ನೆರಡು ದಿನಗಳಲ್ಲಿ ಬಹಿರಂಗಪಡಿಸುವುದಾಗಿ ತಿಳಿಸಿದರು.
ಈಗಾಗಲೇ ಹಲವು ಕಾಂಗ್ರೆಸ್ ಸಚಿವರ ಭ್ರಷ್ಟಾಚಾರ ಬಯಲಾಗಿದೆ. ಇವರ್ಯಾರಿಗೂ ರಾಜ್ಯದ ರೈತರು ಹಾಗೂ ಜನರ ಬಗ್ಗೆ ಕಾಳಜಿ ಇಲ್ಲ. ಇವರಿಗೆ ಕಿವಿಯೂ ಕೇಳುತ್ತಿಲ್ಲ, ಕಣ್ಣು ಕಾಣುತ್ತಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಅವರು ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಸಂಬಂಧಿಸಿದಂತೆ ಆರ್‍ಎಸ್‍ಎಸ್, ಬಿಜೆಪಿಯವರ ಮೇಲೆ ಮಾಡಿರುವ ಆರೋಪಗಳನ್ನು ಸಾಬೀತು ಪಡಿಸಬೇಕು. ರಾಹುಲ್‍ಗಾಂಧಿ ಅವರಿಗೆ ವಾಸ್ತವಾಂಶ ಅರಿಯಲು ತಿಳಿಯುವುದಿಲ್ಲ. ಅವರಿಗೆ ಎಲ್‍ಕೆಜಿ, ಯುಕೆಜಿ ಎಂದರೇನು ತಿಳಿಯುವುದಿಲ್ಲ. ಆ ರೀತಿ ಬಾಲೀಷವಾದ ಹೇಳಿಕೆಗಳನ್ನು ನೀಡುತ್ತಾರೆ. ಇವರ ಹೇಳಿಕೆ ಬಗ್ಗೆ ಈಗಾಗಲೇ ದೂರು ದಾಖಲಾಗಿದ್ದು, ಆರೋಪಗಳನ್ನು ಸಾಬೀತು ಪಡಿಸುವಂತೆ ಸವಾಲು ಹಾಕಿದರು.
Comments