ದಸರಾ : ಹೊರರಾಜ್ಯದ ಪ್ರವಾಸಿಗರಿಗೆ ಸರ್ಕಾರದಿಂದ ಬಂಪರ್ ಆಫರ್!!

ಬೆಂಗಳೂರು: ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಹಾಡು ಬರ್ತಾಯಿದ್ರೆ ಸಾಕು ನಮ್ಮ ರಾಜ್ಯದ ಹೆಮ್ಮೆಯ ಮೈಸೂರು ದಸರಾ ಹಬ್ಬದ ವಿಜೃಂಭಣೆಯ ಆಚರಣೆ ಕಣ್ಣ ಮುಂದೆ ಬರುತ್ತೆ. ಈಗಾಗಲೇ ದಸರಾ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿರೋ ಸರ್ಕಾರ ಹೊರ ರಾಜ್ಯದವರನ್ನು ಆಕರ್ಷಿಸಲು ಹೊಸ ಯೋಜನೆಯೊಂದನ್ನ ಘೋಷಣೆ ಮಾಡಿದೆ.
ಈ ಬಾರಿ ಬರಗಾಲ ಇರೋದ್ರಿಂದ ಸರ್ಕಾರ ಸರಳವಾಗಿ ದಸರಾ ಆಚರಣೆ ಮಾಡಲು ನಿರ್ಧಾರ ಮಾಡಿದ್ದರೂ ಜನ ಮಾತ್ರ ಅದ್ಧೂರಿ ದಸರಾಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಮೈಸೂರು ದಸರಾಗೆ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ರಿಯಾಯಿತಿಗಳನ್ನು ಘೋಷಣೆ ಮಾಡಿರೋ ಸರ್ಕಾರ, ಒಂದು ಹೆಜ್ಜೆ ಮುಂದೆ ಹೋಗಿ ಇಂದಿನಿಂದಲೇ ಜಾರಿಗೆ ಬರುವಂತೆ ಹೊರ ರಾಜ್ಯದ ಟೂರಿಸ್ಟ್ ಟ್ಯಾಕ್ಸಿಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದೆ.
ಈ ಬಗ್ಗೆ ಆದೇಶ ಹೊರಡಿಸಿರೋ ರಾಜ್ಯ ಸರ್ಕಾರ ದಿನಾಂಕ 9-9-2017 ರಿಂದ ದಿನಾಂಕ 9-10-2017 ರವರೆಗೆ ಒಂದು ತಿಂಗಳ ಕಾಲ ಹೊರ ರಾಜ್ಯದ ಟೂರಿಸ್ಟ್ ಟ್ಯಾಕ್ಸಿಗಳಿಗೆ ಯಾವುದೇ ರೀತಿಯ ತೆರಿಗೆಯನ್ನು ವಿಧಿಸಬಾರದು ಅಂತ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶವನ್ನು ಕರ್ನಾಟಕ ಟ್ಯಾಕ್ಸಿ ಅಸೋಸಿಯೇಷನ್ ಸ್ವಾಗತಿಸಿದೆ. ನಮ್ಮ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಿದಂತೆ ಪಕ್ಕದ ರಾಜ್ಯದವರು ಸಹ ಆಯಾ ರಾಜ್ಯದ ಪ್ರಮುಖ ಹಬ್ಬಗಳಿಗೆ ರಿಯಾಯಿತಿ ನೀಡಬೇಕು ಅಂತ ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ ರಾಧಕೃಷ್ಣ ಹೋಳ್ಳ ಹೇಳಿದ್ದಾರೆ.
Comments