ಸಿಎಂ ಬರುವುದಕೆ ಅನುವುಮಾಡಿಕೊಡಲು ಮಂಡ್ಯದಲ್ಲಿ ಸರಕಾರಿ ಮಹಾವಿದ್ಯಾಲಯದ ಕಾಂಪೌಂಡ್‌ನೇ ಒಡೆದು ಹಾಕಲಾಗಿದೆ !

ನಗರದಲ್ಲಿ ಶುಕ್ರವಾರ ನಡೆಯಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕಾಗಿ ಸರಕಾರಿ ಮಹಾವಿದ್ಯಾಲಯದ ಕಾಂಪೌಂಡ್‌ನ್ನು ಎರಡು ಸ್ಥಳಗಳಲ್ಲಿ ಒಡೆದು ಹಾಕಲಾಗಿದೆ.
ಕೇಂದ್ರದ ಅಮೃತ್ ಯೋಜನೆಯಡಿ ಮಂಡ್ಯ ನಗರದಲ್ಲಿ ಅನುಷ್ಠಾನಗೊಳಿಸುತ್ತಿರುವ 3ನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆ, ಒಳಚರಂಡಿ ವ್ಯವಸ್ಥೆ ಪುನರುಜ್ಜೀವನ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಆಶ್ರಯ ಯೋಜನೆ ಸಾಲಮನ್ನಾ ಭಾಗ್ಯ ಪತ್ರಗಳ ವಿತರಣಾ ಸಮಾರಂಭ ಸೆ.8ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕಾಗಿ ಸರಕಾರಿ ಮಹಾವಿದ್ಯಾಲಯ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಈ ಸ್ಥಳಕ್ಕೆ ಒಂದು ಮುಖ್ಯ ದ್ವಾರವಿರುವ ಹಿನ್ನೆಲೆಯಲ್ಲಿ ಗಣ್ಯರು ಮತ್ತು ಸಾರ್ವಜನಿಕರ ಪ್ರತ್ಯೇಕ ಪ್ರವೇಶಕ್ಕಾಗಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಾಲೇಜಿನ ಕಾಂಪೌಂಡ್‌ನ್ನು ಒಡೆದು ಹಾಕಲಾಗಿದೆ. ಒಡೆದಿರುವ ಕಾಂಪೌಂಡ್ ಪ್ರವೇಶ ಮಾರ್ಗದಲ್ಲಿ ಮೆಟ್ಲಿಂಗ್ ಮಾಡಿ ರಸ್ತೆಯನ್ನೇ ನಿರ್ಮಿಸಲಾಗಿದೆ. ಕೇವಲ ಒಂದೆರಡು ತಾಸುಗಳಷ್ಟೇ ಭಾಗವಹಿಸುವ ಮುಖ್ಯಮಂತ್ರಿ ಕಾರ್ಯಕ್ರಮಕ್ಕಾಗಿ ಸರಕಾರಿ ಮಹಾವಿದ್ಯಾಲಯದ ಕಾಂಪೌಂಡ್‌ನ್ನು ಒಡೆದು ಹಾಕಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಈ ರೀತಿ ಹಾಳು ಮಾಡೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
Comments