ಪ್ರಗತಿಪರ ಚಿಂತಕರಿಗೆ ರಕ್ಷಣೆ ನೀಡಲು ಸರ್ಕಾರ ತೀರ್ಮಾನಿಸಿದೆ
ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ಪ್ರಗತಿಪರ ಚಿಂತಕರಿಗೆ ರಾಜ್ಯ ಸರ್ಕಾರ ಪೊಲೀಸ್ ರಕ್ಷಣೆ ನೀಡಲು ತೀರ್ಮಾನಿಸಿದೆ.
ವಿಧಾನಸೌಧದಲ್ಲಿಂದು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಮೂಲಭೂತವಾದಿಗಳು ಪ್ರಗತಿಪರ ಚಿಂತಕರಿಗೆ ಪ್ರಾಣ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಕೊಡಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಈ ಹಿಂದೆ ಸಾಹಿತಿ ಎಂ.ಎಂ.ಕಲಬುರಗಿಯನ್ನು ಕೆಲ ಮೂಲಭೂತವಾದಿಗಳು ಕೆಲ ಭಯಾನಕವಾಗಿ ಹತ್ಯೆ ಮಾಡಿದ್ದರು. ಇದೀಗ ಗೌರಿ ಲಂಕೇಶ್ ಅವರನ್ನು ಕೂಡ ಇದೇ ರೀತಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರವಹಿಸಿದೆ ಎಂದರು.
ಸಮಾಜದಲ್ಲಿ ನಡೆಯುವ ಕೆಲ ಅನಿಷ್ಟ ಪದ್ಧತಿಗಳು, ಮೂಢನಂಬಿಕೆಗಳ ವಿರುದ್ದ ಪ್ರಗತಿಪರರು ಸದಾ ಹೋರಾಟ ಮಾಡುತ್ತಲೇ ಇರುತ್ತಾರೆ. ಅಂಥವರಿಗೆ ಕೆಲ ದುಷ್ಟ ಶಕ್ತಿಗಳು ಪ್ರಾಣ ಬೆದರಿಕೆ ಇಲ್ಲವೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುತ್ತಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಪ್ರಗತಿಪರರಿಗೆ ರಕ್ಷಣೆ ಕೊಡುವಂತೆ ಸರ್ಕಾರ ತೀರ್ಮಾನಿಸಿದೆ.
Comments