ಎಟಿಎಂಗೆ ಹೊಸ 200 ರೂ. ಬರಲು 3 ತಿಂಗಳು ಬೇಕು

04 Sep 2017 11:03 AM | General
315 Report

ಹೊಸದಿಲ್ಲಿ: ಎಟಿಎಂಗಳಿಗೆ ನೂತನ 200 ರೂ. ಮುಖಬೆಲೆಯ ನೋಟು ಬರಲು ಇನ್ನೂ 3 ತಿಂಗಳು ಕಾಲ ಬೇಕಾಗುತ್ತದೆ. ಹೊಸ ನೋಟು ಬರುವಂತೆ ಮಾಡಲು ಎಟಿಎಂ ಯಂತ್ರದ ಒಳಗಿನ ವ್ಯವಸ್ಥೆಯನ್ನು ಬದಲಿಸಬೇಕಾಗುತ್ತದೆ.

ಸದ್ಯಕ್ಕೆ ಆಯ್ದ ಆರ್‌ಬಿಐ ಕಚೇರಿ ಮತ್ತು ಕೆಲವು ಬ್ಯಾಂಕ್‌ಗಳಲ್ಲಿ ಮಾತ್ರ ಹೊಸ ನೋಟು ಲಭ್ಯವಿದೆ. ಎಟಿಎಂ ಒಳ ವಿನ್ಯಾಸವನ್ನು ಬದಲಿಸುವ ಮೂಲಕ 200 ರೂ. ನೋಟು ಬರುವಂತೆ ಮಾಡಬೇಕಾಗುತ್ತದೆ. ಈ ಬದಲಾವಣೆ ಮಾಡಲು ಈಗಾಗಲೇ ಅನೇಕ ಬ್ಯಾಂಕ್‌ಗಳು ಎಟಿಎಂ ಕಂಪನಿಗಳನ್ನು ಕೋರಿವೆ.

ಕಳೆದ ವರ್ಷವಷ್ಟೇ 2000 ರೂ. ಮುಖಬೆಲೆಯ ನೋಟು ಪೂರೈಕೆಗೆ ಪೂರಕವಾಗಿ ಎಟಿಎಂ ಯಂತ್ರದ ಒಳ ವಿನ್ಯಾಸವನ್ನು ಬದಲಿಸಲಾಗಿತ್ತು. ಇದೀಗ ಮತ್ತೊಂದು ಸುತ್ತಿನ ಕಸರತ್ತು ಮಾಡಬೇಕಾಗಿದೆ. ಇದಕ್ಕೆ ಯಾವುದೇ ಕಾಲಮಿತಿಯನ್ನು ಆರ್‌ಬಿಐ ಹಾಕಿಕೊಂಡಿಲ್ಲ. ದೈನಂದಿನ ಎಟಿಎಂ ಚಟುವಟಿಕೆಗೆ ಧಕ್ಕೆಯಾಗದಂತೆ ಹೊಸ ನೋಟು ಪೂರೈಕೆಯ ವ್ಯವಸ್ಥೆ ಮಾಡಲು ಕನಿಷ್ಠ ಮೂರು ತಿಂಗಳಾದರೂ ಬೇಕಾಗುತ್ತದೆ. ಏತನ್ಮಧ್ಯೆ, ಈ ಬಗ್ಗೆ ಆರ್‌ಬಿಐನಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಎಟಿಎಂ ತಯಾರಕ ಕಂಪನಿಗಳು ಹೇಳಿವೆ.

ತಮ್ಮ ಬ್ಯಾಂಕ್‌ನ ಶಾಖೆಗಳಿಗೆ ಹೊಸ 200 ರೂ. ನೋಟುಗಳು ಬಂದಿವೆ ಎಂದು ಮಂಗಳೂರಿನ ಕಾರ್ಪೊರೇಷನ್‌ ಬ್ಯಾಂಕ್‌ನ ಕೈವೈಸಿ-ಆ್ಯಂಟಿಮನಿ ಲಾಂಡರಿಂಗ್‌ ಸೆಲ್‌ ವ್ಯವಸ್ಥಾಪಕ ಏಕನಾಥ್‌ ಬಾಳಿಗ ಹೇಳಿದ್ದಾರೆ. ಇದೇ ರೀತಿ ಎಸ್‌ಬಿಐ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗಳಲ್ಲೂ ಹೊಸ ನೋಟು ಲಭ್ಯ.ದೇಶದಲ್ಲಿ ಒಟ್ಟು 2.25 ಲಕ್ಷ ಎಟಿಎಂ ಯಂತ್ರಗಳಿವೆ.

Courtesy: vijaya karnataka

Comments