ಕೂಡಲ ಸಂಗಮದಲ್ಲಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸ್ತು ಸಂಗ್ರಹಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಸೆ.01) ನಡೆದ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಸ್ತು ಸಂಗ್ರಹಾಲಯ ಸ್ಥಾಪನೆಗೆ ಸಲಹೆ, ಸೂಚನೆ ಪಡೆಯಲು ತಜ್ಞರ ಸಮಿತಿ ರಚಿಸಲು ತೀರ್ಮಾನಿಸಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಸವಣ್ಣ ಮತ್ತಿತರ ಶರಣರು ಪ್ರತಿಪಾದಿಸಿದ ವಿಚಾರ ಧಾರೆಗಳನ್ನು ಪ್ರವಾಸಿಗರಿಗೆ ಮನಮುಟ್ಟುವಂತೆ ವಿವರಿಸುವುದು ವಸ್ತು ಸಂಗ್ರಹಾಲಯದ ಉದ್ದೇಶವಾಗಬೇಕು ಎಂದು ಹೇಳಿದರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಮ ಸಮಾಜದ ನಿರ್ಮಾಣ ಕುರಿತು ಬಸವಣ್ಣ ಅವರು ಹೇಳಿದ್ದರು. ಇದೂ ಸೇರಿದಂತೆ ಅವರ ಎಲ್ಲ ವಿಚಾರ ಧಾರೆ ವಿಶ್ವದ ಗಮನ ಸೆಳೆಯುವ ವ್ಯವಸ್ಥೆ ವಸ್ತು ಸಂಗ್ರಹಾಲಯದಲ್ಲಿರಬೇಕು ಎಂದು ತಿಳಿಸಿದರು.
Comments