ವಿತ್ತ ಸಚಿವ ಸ್ಥಾನಕ್ಕೆ ಅರುಣ್ ಜೇಟ್ಲಿ ಶೀಘ್ರವೇ ರಾಜಿನಾಮೆ?
ನವದೆಹಲಿ : ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಇದೇ ವರ್ಷಾಂತ್ಯಕ್ಕೆ ಗುಜರಾತ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಉಸ್ತುವಾರಿ ವಹಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ, ಜೇಟ್ಲಿ ಅವರು ಕೇಂದ್ರ ಸರ್ಕಾರದಲ್ಲಿ ಹೊಂದಿರುವ ಮಹತ್ವದ ವಿತ್ತ ಖಾತೆಗೆ ರಾಜಿನಾಮೆ ಸಲ್ಲಿಸಿ ಗುಜರಾತ್ ಚುನಾವಣೆಯ ಜವಾಬ್ದಾರಿಯನ್ನು ಹೊರಲಿದ್ದಾರೆಂದು ಕೆಲವು ಉನ್ನತ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಸರ್ಕಸ್ ಈಗಾಗಲೇ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ 13 ಸಚಿವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ಇವರಲ್ಲಿ ರಾಜೀವ್ ಪ್ರತಾಪ್ ರೂಡಿ, ಅಶೋಕ್ ಗಣಪತಿ ರಾಜು, ಉಮಾಭಾರತಿ ಪ್ರಮುಖರು. ಇದೀಗ, ಜೇಟ್ಲಿ ಅವರನ್ನು ಸಂಪುಟ ಜವಾಬ್ದಾರಿಯಿಂದ ಹೊರತುಪಡಿಸಿ ಅವರಿಗೆ ಗುಜರಾತ್ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.
ಏತನ್ಮಧ್ಯೆ, ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇಲ್ಲವಾಗಿದೆ. ಅವರ ಬದಲಿಗೆ ಕರ್ನಾಟಕದಿಂದ ಹೊಸ ಮುಖದ ವ್ಯಕ್ತಿಯೊಬ್ಬರಿಗೆ ಸಚಿವ ಸ್ಥಾನ ನೀಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
Comments