2018ರ ಚುನಾವಣೆ ತಯಾರಿ : ಜೆಡಿಎಸ್ ಪದಾಧಿಕಾರಿಗಳ ಪಟ್ಟಿ ಬಿಡುಗಡೆ
ಬೆಂಗಳೂರು : ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಕರ್ನಾಟಕ ಜೆಡಿಎಸ್ 136 ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ನಿಂದ ಜೆಡಿಎಸ್ಗೆ ಬಂದಿರುವ ಎಚ್.ವಿಶ್ವನಾಥ್ ಅವರನ್ನು ಪ್ರಚಾರ ಸಮಿತಿ ಮತ್ತು ಚಿಂತನಾ ವಿಭಾಗಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು. 25 ರಾಜ್ಯಉಪಾಧ್ಯಕ್ಷರು, 26 ಪ್ರಧಾನ ಕಾರ್ಯದರ್ಶಿಗಳು, 12 ಕಾರ್ಯದರ್ಶಿಗಳು, 25 ಜಂಟಿ ಕಾರ್ಯದರ್ಶಿಗಳು ಮತ್ತು 47 ಸಂಘಟನಾ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡ, 'ಸೆಪ್ಟೆಂಬರ್ 22 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪರಿಶಿಷ್ಟ ಜಾತಿ/ಪಂಗಡದ ಸಮಾವೇಶ ನಡೆಸಲಾಗುತ್ತದೆ. ಅಕ್ಟೋಬರ್‌ನಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಸಮಾವೇಶ ಆಯೋಜಿಸಲಾಗುತ್ತದೆ' ಎಂದರು. ಪ್ರಚಾರ ಸಮಿತಿ ಮತ್ತು ಚಿಂತನಾ ವಿಭಾಗಕ್ಕೆ ಎಚ್.ವಿಶ್ವನಾಥ್, ಸಂಸದೀಯ ಮಂಡಳಿಗೆ ಬಂಡೆಪ್ಪ ಕಾಶೆಂಪುರ. ರಾಜಕೀಯ ವ್ಯವಹಾರ ಸಮಿತಿಗೆ ಎಚ್.ಸಿ.ನೀರಾವರಿ, ಕಾನೂನು ವಿಭಾಗಕ್ಕೆ ಎ.ಪಿ.ರಂಗನಾಥ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
'ಪದಾಧಿಕಾರಿಗಳ ಪಟ್ಟಿಯಲ್ಲಿ ಎಲ್ಲಾ ಜಾತಿ/ಧರ್ಮದ ಮುಖಂಡರಿಗೂ ಅವಕಾಶ ನೀಡಲಾಗಿದೆ' ಎಂದು ದೇವೇಗೌಡರು ಹೇಳಿದರು. ಮಹಿಳಾ ಘಟಕ್ಕೆ ಅರ್ಷಿಯಾ ಅಲಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದು, ಪ್ರಭಾವತಿ ಜಯರಾಂ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿಗಳ ಪಟ್ಟಿ :
- ಜಿ.ಟಿ.ದೇವೇಗೌಡ : ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು
- ಬಿ.ಬಿ.ನಿಂಗಯ್ಯ : ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ
- ಎನ್.ಎಚ್.ಕೋನರೆಡ್ಡಿ : ರಾಯಚೂರು, ಯಾದಗಿರಿ, ಬೀದರ್, ಕಲಬುರಗಿ
Comments