ದಲಿತ ಕುಟುಂಬಗಳಿಗೆ ಬಿಎಸ್'ವೈ ಮನೆಯಲ್ಲಿ ಊಟದ ವ್ಯವಸ್ಥೆ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ತಮ್ಮ ಜನಸಂಪರ್ಕ ಯಾತ್ರೆ ವೇಳೆ ತಮಗೆ ಆತಿಥ್ಯ ನೀಡಿ ಊಟ ಹಾಕಿದ್ದ 66 ದಲಿತ ಕುಟುಂಬಗಳಿಗೆ ಅನ್ನದ ಋಣ ತೀರಿಸುತ್ತಿದ್ದಾರೆ. ಬಿಎಸ್'ವೈ ಆ ಎಲ್ಲಾ ದಲಿತ ಕುಟುಂಬಗಳನ್ನು ತಮ್ಮ ಮನೆಗೆ ಕರೆಸಿ ಊಟ ಹಾಕಿ ಸತ್ಕರಿಸಲು ನಿರ್ಧರಿಸಿದ್ದಾರೆ.
ಈ ನಿಟ್ಟಿನಲ್ಲಿ ಮೊದಲ ಹಂತವಾಗಿ 33 ಕುಟುಂಬಗಳನ್ನು ಯಡಿಯೂರಪ್ಪನವರು ಇಂದು ಸೋಮವಾರ ತಮ್ಮ ಡಾಲರ್ಸ್ ಕಾಲೊನಿಯಲ್ಲಿರುವ ನಿವಾಸಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಬಿಎಸ್'ವೈ ಮನೆಯ ಡೈನಿಂಗ್'ಹಾಲ್'ನಲ್ಲೇ ಇಂದು ಮಧ್ಯಾಹ್ನ ಆ ಎಲ್ಲ ದಲಿತರಿಗೂ ಊಟ ಬಡಿಸುವ ಏರ್ಪಾಡು ಮಾಡಲಾಗಿದೆ.
ಯಡಿಯೂರಪ್ಪನವರ ಪುತ್ರಿ ಉಮಾ ದೇವಿ ಅವರೇ ಖುದ್ದಾಗಿ ನಿಂತು ಅಡುಗೆ ಏರ್ಪಾಡು ಮಾಡಿದ್ದಾರೆ. ಪುತ್ರ ಬಿವೈ ರಾಘವೇಂದ್ರ, ಶೋಭಾ ಕರಂದ್ಲಾಜೆ ಕೂಡ ಈ ಭೋಜನಕೂಟದ ವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದಾರೆ. ಬದನೆಕಾಯಿ ಪಲ್ಯ, ಹೋಳಿಗೆ ಮೊದಲಾದ ಭಕ್ಷ್ಯಗಳು ಸಿದ್ಧವಾಗುತ್ತಿವೆ. ಬಿಎಸ್'ವೈನವರ ದಲಿತ ಭೋಜನಕೂಟದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಕೂಡ ಪಾಲ್ಗೊಳ್ಳಲಿದ್ದಾರೆ. ಡಾಲರ್ಸ್ ಕಾಲೊನಿಯಲ್ಲಿರುವ ಬಿಎಸ್'ವೈ ನಿವಾಸದಲ್ಲಿ ಸಾಕಷ್ಟು ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮೇ 18ರಿಂದ ಜೂನ್ 29ರವರೆಗೆ ರಾಜ್ಯಾದ್ಯಂತ 27 ಜಿಲ್ಲೆಗಳ 87 ವಿಧಾನಸಭಾ ಕ್ಷೇತ್ರಗಳಲ್ಲಿ ಯಡಿಯೂರಪ್ಪನವರು ಜನಸಂಪರ್ಕ ಅಭಿಯಾನ ಕೈಗೊಂಡಿದ್ದರು. ಈ ಸಂದರ್ಭದಲ್ಲಿ 66 ದಲಿತ ಕುಟುಂಬಗಳ ಮನೆಗಳಿಗೆ ಭೇಟಿಕೊಟ್ಟು ಉಪಾಹಾರ, ಭೋಜನ ಸೇವಿಸಿದ್ದರು. ಬಿಎಸ್'ವೈ ಅಷ್ಟೇ ಅಲ್ಲ, ಇತರ ಕೆಲ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೂ ಕೂಡ ದಲಿತರ ಮನೆಗಳಲ್ಲಿ ಊಟ ಮಾಡಿದ್ದರು. ಈ ಮೂಲಕ ಬಿಜೆಪಿಯು ದಲಿತವಿರೋಧಿ ಎಂಬ ಹಣೆಪಟ್ಟಿಯನ್ನು ಕಿತ್ತೊಗೆಯುವ ಪ್ರಯತ್ನ ನಡೆದಿದೆ.
Comments