ನೋ ಪಾರ್ಕಿಂಗ್: ಪೊಲೀಸರ ಟೋಯಿಂಗ್ ವಾಹನಕ್ಕೇ ದಂಡ!
ಬೆಂಗಳೂರು:ನೋ ಪಾರ್ಕಿಂಗ್ನಲ್ಲಿ ವಾಹನ ನಿಲುಗಡೆ ಮಾಡಿದ್ದ ಪೊಲೀಸರ ‘ಟೈಗರ್’ (ಟೋಯಿಂಗ್ ವಾಹನ) ವಾಹನಕ್ಕೆ ಸಂಚಾರ ಪೊಲೀಸರೇ ದಂಡ ವಿಧಿಸಿದ್ದಾರೆ. ಇದೀಗ ತನ್ನದೇ ಠಾಣೆಗೆ ಸೇರಿದ ಟೋಯಿಂಗ್ ವಾಹನಕ್ಕೆ ಹಲಸೂರು ಸಂಚಾರ ಠಾಣೆ ಪೊಲೀಸರು ದಂಡ ವಿಧಿಸುವ ಮೂಲಕ ಯಾರೇ ಸಂಚಾರ ನಿಯಮ ಉಲ್ಲಂಘಿಸಿದರೂ ದಂಡ ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಹಲಸೂರು ಸಂಚಾರ ಠಾಣೆ ಸಮೀಪ ಇರುವ ಖಾಸಗಿ ಶಾಲೆ ಎದುರಿನ ಪಾದಚಾರಿ ಮಾರ್ಗದಲ್ಲಿ ಟೋಯಿಂಗ್ ವಾಹನವನ್ನು ಚಾಲಕ ನಿಲ್ಲಿಸುತ್ತಿದ್ದ. ಇದರಿಂದ ಶಾಲಾ ಮಕ್ಕಳು ಸೇರಿ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿತ್ತು. ಈ ಬಗ್ಗೆ ಸ್ಥಳೀಯರು ಟೈಗರ್ ವಾಹನ ಚಾಲಕನ ಗಮನಕ್ಕೆ ತಂದು ಸೂಚನೆ ನೀಡಿದ್ದರೂ ಚಾಲಕ ಹಲವು ದಿನಗಳಿಂದ ಇದೇ ಸ್ಥಳದಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದನು.ಟೈಗರ್ ವಾಹನ ನಿಲುಗಡೆಗೆ ಠಾಣೆಯ ಬಳಿಯೇ ಜಾಗವಿದೆ. ಆದರೂ ಚಾಲಕ ವಾಹನವನ್ನು ಫುಟ್‌ಪಾತ್ ಮೇಲೆ ನಿಲ್ಲಿಸುತ್ತಿದ್ದ.
ಈ ಬಗ್ಗೆ ಸ್ಥಳೀಯರು ದೂರಿದ್ದರು, ನಾವು ಸಹ ಚಾಲಕನಿಗೆ ಎಚ್ಚರಿಕೆ ನೀಡಿದ್ದೆವು. ಆದರೂ ಅದೇ ಜಾಗದಲ್ಲಿ ನಿಲ್ಲಿಸುತ್ತಿದ್ದ. ಆದ್ದರಿಂದ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಹಲಸೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
Comments