ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆಯ ಅರ್ಭಟ- ಸ್ಥಳಕ್ಕೆ ಬಾರದ ಅಧಿಕಾರಿಗಳು
ಕಳೆದ ರಾತ್ರಿ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆ ಕೋಡಿಯಲ್ಲಿ ನೊರೆಯ ಅರ್ಭಟ ಹೆಚ್ಚಾಗಿದೆ.
ಈ ನೊರೆಯನ್ನು ನಿಯಂತ್ರಿಸುವ ಸಲುವಾಗಿ ನೀರು ಸಿಂಪಡಿಸಲು ಅಳವಡಿಸಿದ್ದ ಮೋಟರ್ ರಿಪೇರಿಯಾಗಿರುವುದರಿಂದ ನೊರೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ವಾಹನ ಸವಾರರು ಪರದಾಡುವಂತಾಗಿದೆ. ಪ್ರತಿ ಬಾರಿ ಮಳೆ ಬಂದಾಗಲು ಬೆಳ್ಳಂದೂರು ಕೆರೆ, ವರ್ತೂರು ಕೆರೆ ಸುತ್ತಮುತ್ತಲಿನ ಪ್ರದೇಶದ ಜನರು ನೊರೆಯ ಸಮಸ್ಯೆ ಜೊತೆಗೆ ದುರ್ವಾಸನೆ, ಸೊಳ್ಳೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಕೆರೆಯನ್ನು ಅಭಿವೃದ್ಧಿಪಡಿಸಿ ಎಂದು ಹಸಿರು ನ್ಯಾಯ ಪೀಠ ಕರ್ನಾಟಕ ಸರ್ಕಾರಕ್ಕೆ ಛೀಮಾರಿ ಹಾಕಿದ್ದರೂ ಸೂಕ್ತ ಕ್ರಮ ಕೈಗೊಳ್ಳದೆ ಕಾಟಚಾರಕ್ಕಾಗಿ ಅರ್ಧ ಕೆಲಸ ಮಾಡಿ ಬಿಟ್ಟಿರುವುದರಿಂದ ಮತ್ತೆ ನೊರೆಯ ಸಮಸ್ಯೆ ಉಲ್ಬಣವಾಗಿದೆ.
ಕಳೆದ ನಾಲ್ಕು ದಿನಗಳಿಂದ ಈ ಸಮಸ್ಯೆ ಹೆಚ್ಚಾಗಿದ್ದರೂ ಬಿಡಿಎ, ಬಿಬಿಎಂಪಿ ಹಾಗೂ ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿಗಳು ಇತ್ತ ಸುಳಿಯದೆ ತಮಗೂ ಈ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಸುಮ್ಮನಾಗಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಇನ್ನಾದರು ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ನೊರೆ ಭಾಗ್ಯಕ್ಕೆ ಮುಕ್ತಿ ಕಲ್ಪಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ
Comments