ಡಿ ಕೆ ಸುರೇಶ್’ಗೆ ರವಿ ಪೂಜಾರಿಯಿಂದ ಬೆದರಿಕೆ?
ಬೆಂಗಳೂರು : ಕೆಲ ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಸುಳಿಗೆ ಸಿಲುಕಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸೋದರ ಸಂಸದ ಡಿ.ಕೆ.ಸುರೇಶ್ ಅವರಿಗೆ ಭೂಗತ ಪಾತಕಿಗಳಿಂದ ಬೆದರಿಕೆ ಬಂದಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಸದಾಶಿವನಗರದಲ್ಲಿರುವ ಸಂಸದರ ಗೃಹ ಕಚೇರಿಗೆ ರವಿ ಪೂಜಾರಿ ಎಂಬಾತನ ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ ಈ ಕರೆ ಬಂದ ಸಂದರ್ಭದಲ್ಲಿ ಸಂಸದರು ಬಿಡದಿ ಹತ್ತಿರದ ಈಗಲ್‌ಟನ್ ರೆಸಾರ್ಟ್‌ನಲ್ಲಿ ತಂಗಿದ್ದ ಗುಜರಾತ್ ಶಾಸಕರ ಉಸ್ತುವಾರಿ ವಹಿಸಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಸಂಸದರ ಸಹಾಯಕ ಅರುಣ್ ದೇವ್ ದೂರು ದಾಖಲಿಸಿದ್ದಾರೆ. ಹಿಂದಿಯಲ್ಲಿ ಮಾತನಾಡಿದ ಆರೋಪಿ, ‘ನಾನು ರವಿ ಪೂಜಾರಿ. ಹಣಕ್ಕಾಗಿ ಕರೆ ಮಾಡಿದ್ದೇನೆ’ ಎಂದಿದ್ದಾನೆ. ಪೂಜಾರಿ ವಿರುದ್ಧ ಸುಲಿಗೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Comments