ಕರ್ನಾಟಕ ಪರಿಸರ ಅನುಮತಿ ಪಡೆದಿಲ್ಲ: ಕೇಂದ್ರ

ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲು ಕರ್ನಾಟಕ ಸರ್ಕಾರ ಪರಿಸರ ಅನುಮತಿಗಾಗಿ ಯಾವುದೇ ರೀತಿಯ ಪ್ರಸ್ತಾವನೆ ಸಲ್ಲಿಸಿಲ್ಲ. ಕಾಮಗಾರಿಗಾಗಿ ಅನುಮತಿಯನ್ನೂ ಪಡೆದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಸ್ಪಷ್ಟಪಡಿಸಿದೆ.
ಮಹದಾಯಿ ಕಣಿವೆ ವ್ಯಾಪ್ತಿಯ ಕಳಸಾ ಮತ್ತು ಬಂಡೂರಿ ನಾಲೆಗಳು ಪಶ್ಚಿಮ ಘಟ್ಟದಲ್ಲಿನ ಸೂಕ್ಷ್ಮ ಪರಿಸರ ಪ್ರದೇಶದಲ್ಲಿದ್ದು, ಕರ್ನಾಟಕ ಸರ್ಕಾರವು ಅರಣ್ಯ ಸಂರಕ್ಷಣೆ ಕಾಯ್ದೆ- 1980ರ ಅಡಿ ಕಾಮಗಾರಿಗಾಗಿ ಅನುಮತಿ ಪಡೆದಿಲ್ಲ ಎಂದು ದೂರಿ ಗೋವಾದ ಮಹದಾಯಿ ಬಚಾವೋ ಅಭಿಯಾನದ ಕಾರ್ಯಕರ್ತರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆಗಸ್ಟ್ 3ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದರಿಂದ, 'ನಮ್ಮ ದಾಖಲೆಗಳ ಪ್ರಕಾರ ಕರ್ನಾಟಕ ಅನುಮತಿಯನ್ನು ಕೋರಿಲ್ಲ' ಎಂದು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಶುಕ್ರವಾರ ಅಫಿಡವಿಟ್ ಸಲ್ಲಿಸಿದೆ.ಕಳಸಾ- ಬಂಡೂರಿ ನಾಲೆಗಳಿರುವ ಜಾಗದಲ್ಲಿ ಎರಡು ಆಣೆಕಟ್ಟೆ ಕಟ್ಟುವುದಾಗಿ ತಿಳಿಸಿ ಕರ್ನಾಟಕ ಸರ್ಕಾರ 2001ರಲ್ಲಿ ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕರಿಸಿ, ಗೋವಾದೊಂದಿಗಿನ ಜಲವಿವಾದ ಬಗೆಹರಿಯುವವರೆಗೆ ಅನುಮತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದಾಗಿ ತಿಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ಪರಿಸರ ಅನುಮತಿ ಪಡೆಯದೆ ಕರ್ನಾಟಕವು ಮಹದಾಯಿ ನದಿ ತಿರುವು ಯೋಜನೆ ಜಾರಿಗೊಳಿಸುವಂತಿಲ್ಲ.
ಆದರೆ, 2011ರಲ್ಲಿ ರಚಿಸಲಾಗಿರುವ ಮಹದಾಯಿ ಜಲವಿವಾದ ನ್ಯಾಯಮಂಡಳಿಯು ಐತೀರ್ಪು ನೀಡಿದ ನಂತರವಷ್ಟೇ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ ಎಂದು ವಿವರಿಸಲಾಗಿದೆ
Comments