ಕಲ್ಲಡ್ಕ ಶಾಲೆಗೆ ಅನುದಾನ ಕಟ್, ಬಟ್ಟಲು ಹಿಡಿದು ಬೀದಿಗಿಳಿದ ವಿದ್ಯಾರ್ಥಿಗಳು

'ಅನ್ನ ಕಸಿದ ಸಿದ್ದರಾಮಯ್ಯ' ಎನ್ನುವ ಘೋಷಣೆ ಇಂದು ಕಲ್ಲಡ್ಕದ ಸೇರಿದಂತೆ ಬಂಟ್ವಾಳದ ಬಿಸಿ ರೋಡ್ ನಲ್ಲಿ ಕೇಳಿ ಬಂತು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಅನುದಾನ ಕಡಿತಗೊಳಿಸಿದ್ದನ್ನು ವಿರೋಧಿಸಿ ಬೀದಿಗಿಳಿದ ಪುಟಾಣಿ ಮಕ್ಕಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಕೊಲ್ಲೂರು ದೇವಸ್ಥಾನದಿಂದ ಲಭಿಸುತ್ತಿದ್ದ ಅನುದಾನವನ್ನು ಕೆಲವು ದಿನಗಳ ಹಿಂದೆ ಕಡಿತಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಬಿ.ಸಿ.ರೋಡಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಎರಡೂ ಶಾಲೆಗಳ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ಪಾಲ್ಗೊಂಡಿದ್ದರು.
ಊಟದ ಬಟ್ಟಲು ಹಿಡಿದು ರಸ್ತೆಗಿಳಿದ ಎರಡೂ ಶಾಲೆಯ ನಾಲ್ಕು ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳು 'ಅನ್ನ ಕಸಿದ ಸಿದ್ದರಾಮಯ್ಯ', 'ರಾಜ್ಯ ಸರಕಾರಕ್ಕೆ ಧಿಕ್ಕಾರ', ಅನ್ನೋ ಘೋಷಣೆಯನ್ನು ಮಕ್ಕಳು ಕೂಗಿದರು. ಚಿಕ್ಕ ಚಿಕ್ಕ ಮಕ್ಕಳು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ವಿರುದ್ಧವೂ ಧಿಕ್ಕಾರ ಹಾಕಿದರು.
ಕಳೆದ ಹತ್ತು ವರ್ಷಗಳಲ್ಲಿ ಕಲ್ಲಡ್ಕ ಮತ್ತು ಪುಣಚದಲ್ಲಿರುವ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ನೇತೃತ್ವದ ಎರಡು ಶಾಲೆಗಳಿಗೆ ಅನುದಾನ ಲಭಿಸುತ್ತಿತ್ತು. ಇದೀಗ ಹಠಾತ್ತಾಗಿ ರಾಜ್ಯ ಸರಕಾರ ಮುಜರಾಯಿ ದೇವಸ್ಥಾನದಿಂದ ಲಭಿಸುತ್ತಿದ್ದ ಅನುದಾನಕ್ಕೆ ಬ್ರೇಕ್ ಹಾಕಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
Comments