ಹಿಂದಿಯ 'ಜೀ' ಬದಲಿಗೆ ಕನ್ನಡದ 'ಅವರೆ'; ಇದು ಕಾಂಗ್ರೆಸಿನ ಹೊಸ ಉಪಾಯ

ಬೆಂಗಳೂರು : ಸದಾ ಕನ್ನಡ ಜಪದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಹಿಂದಿ ಹೇರಿಕೆಯನ್ನು ಕುಂತಲ್ಲಿ ನಿಂತಲ್ಲಿ ವಿರೋಧಿಸಲು ತೊಡಗಿದೆ. ಅದಕ್ಕೀಗ ಹೊಸ ಸೇರ್ಪಡೆಯೇ ಈ 'ಅವರೆ'.
ಇದು ಅವರೆ ಕಾಳಲ್ಲ ಬದಲಿಗೆ ಗೌರವ ಸೂಚಕವಾಗಿ ಬಳಸುವ 'ಅವರೆ' ಶಬ್ದ; ಹಿಂದಿಯಲ್ಲಿ ಸಾಮಾನ್ಯವಾಗಿ ಗೌರವ ಸೂಚವಾಗಿ 'ಜೀ' ಪದವನ್ನು ಬಳಸುತ್ತಾರೆ. ರಾಹುಲ್ ಜೀ, ಸೋನಿಯಾ ಜೀ.. ಹೀಗೆ. ಇದಕ್ಕೀಗ ಹೊಸ ಉಪಾಯ ಕಂಡುಕೊಂಡಿರುವ ಕರ್ನಾಟಕದ ಕಾಂಗ್ರೆಸಿಗರು 'ಅವರೆ' ಪದ ಬಳಕೆ ಮಾಡಲು ಆರಂಭಿಸಿದ್ದಾರೆ. ರಾಹುಲ್ ಅವರೆ, ಸೋನಿಯಾ ಅವರೆ ಎನ್ನಲು ತೊಡಗಿದ್ದಾರೆ.ಕನ್ನಡದಲ್ಲಿ ಮಾತ್ರವಲ್ಲ ಇಂಗ್ಲೀಷಿನಲ್ಲಿಯೂ 'ಅವರೆ' ಎಂದು ಬಳಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಇದೇ ರೀತಿ 'ಅವರೆ' ಪದವನ್ನು ಬಳಸಿದ್ದಾರೆ.
ಕೆಲವು ದಿನಗಳ ಹಿಂದೆ ಸದಾನಂದ ಗೌಡರಿಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡುವಾಗಲೂ ಸಿದ್ದರಾಮಯ್ಯ 'ಅವರೆ' ಪದವನ್ನು ಬಳಸಿದ್ದರು.ಇದೇ ರೀತಿ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ 'ಅವರೆ' ಪದ ಪ್ರಯೋಗ ಮಾಡಿ ಟ್ವೀಟ್ ಮಾಡಿದ್ದಾರೆ.
ಹೀಗೆ ಹಿಂದಿ ಹೇರಿಕೆ ವಿರೋಧಿ ಹೋರಾಟವನ್ನು ಬೇಗ ಗ್ರಹಿಸಿಕೊಂಡು ತಮ್ಮ ನಡವಳಿಕೆಯಲ್ಲೂ ಅಳವಡಿಸಿಕೊಂಡಿದ್ದಾರೆ ಕರ್ನಾಟಕದ ಕಾಂಗ್ರೆಸ್ ನಾಯಕರು. ಈ ಮೂಲಕ ಕನ್ನಡ ಭಾವನಾತ್ಮಕೆಯನ್ನು ಬಳಸಿ ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸಿಗರು ಚುನಾವಣಾ ಸಮರ ಸಾರಿದ್ದಾರೆ.
Comments