ಕಾಶ್ಮೀರದಲ್ಲಿ ಕುಡಿನ ಕಾಳಗ, ಮೂವರು ಎಲ್ಇಟಿ ಉಗ್ರರ ಹತ್ಯೆ
ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡಿದೆ. ಬಾರಾಮುಲ್ಲಾ ಜಿಲ್ಲೆಯ ಸಪೋರ್ ಪ್ರದೇಶದಲ್ಲಿ ನಿಷೇಧಿತ ಲಷ್ಕರ್-ಎ-ತೈಬಾ (ಎಲ್‍ಇಟಿ) ಉಗ್ರಗಾಮಿ ಸಂಘಟನೆಯ ಮೂವರು ಆತಂಕವಾದಿಗಳನ್ನು ಯೋಧರು ಹೊಡೆದುರುಳಿಸಿದ್ದಾರೆ. ಭಾರೀ ವಿಧ್ವಂಸಕ ಕೃತ್ಯಕ್ಕೆ ಉಗ್ರರು ರೂಪಿಸಿದ್ದ ಸಂಚು ಇದರೊಂದಿಗೆ ವಿಫಲವಾಗಿದೆ.
ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಒಳನುಸುಳುವಿಕೆ ಮತ್ತು ಯೋಧರ ಮೇಲೆ ದಾಳಿಗಳ ಯತ್ನಗಳನ್ನು ಉಗ್ರರು ತೀವ್ರಗೊಳಿಸಿದ್ದರೆ, ಅದಕ್ಕೆ ಪ್ರತಿಯಾಗಿ ದಿಟ್ಟ ಪ್ರತ್ಯುತ್ತರ ನೀಡುತ್ತಿರುವ ಭಾರತೀಯ ಸೇನಾಪಡೆಗಳು ಭಯೋತ್ಪಾದಕರ ಹುಟ್ಟಡಗಿಸುವ ಕಾರ್ಯಾಚರಣೆಯನ್ನೂ ತ್ರೀವ್ರಗೊಳಿಸಿವೆ.
ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಅಮರ್‍ಗಢ್ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಭಯೋತ್ಪಾದಕರು ಯೋಧರ ಮೇಲೆ ಗುಂಡು ಹಾರಿಸಿದಾಗ ಎನ್‍ಕೌಂಟರ್ ನಡೆಯಿತು.
ಕೆಲಕಾಲ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಮೂವರು ಎಲ್‍ಇಟಿ ಉಗ್ರರು ಹತರಾದರು. ಯೋಧರ ಗುಂಡಿಗೆ ಬಲಿಯಾದ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾಪಡೆಗಳ ಜೊತೆ ಮೊನ್ನೆ ಇಡೀ ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಹಿಜ್‍ಬುಲ್ ಮುಜಾಹಿದೀನ್ (ಎಚ್‍ಎಂ) ಉಗ್ರಗಾಮಿ ಸಂಘಟನೆಯ ಸ್ಥಳೀಯ ಭಯೋತ್ಪಾದಕ ಯಾವರ್ ನಿಸ್ಸಾರ್ ಶೇರ್‍ಗುರ್ಜಿ ಅಲಿಯಾಸ್ ಅಲ್‍ಘಾಜಿ ಹತನಾಗಿದ್ದ. ಹತ ಭಯೋತ್ಪಾದಕನಿಂದ ಒಂದು ಎಸ್‍ಎಲ್‍ಆರ್ (ಸೆಲ್ಫ್ ಲೋಡಿಂಗ್ ರೈಪಲ್), 2 ಮ್ಯಾಗಝೈನ್‍ಗಳು, 40 ಸುತ್ತು ಗುಂಡುಗಳು, ಒಂದು ಚೀನಿ ತಯಾರಿಕೆಯ ಹ್ಯಾಂಡ್ ಗ್ರೆನೇಡ್ ಹಾಗೂ ಪೌಚ್ ವಶಪಡಿಸಿಕೊಳ್ಳಲಾಗಿತ್ತು.
Comments