ಇನ್ಮುಂದೆ ರೈಲ್ವೆ ಎಸಿ ಕೋಚ್ ಪ್ರಯಾಣಿಕರಿಗೆ ಹೊಸ ಹೊದಿಕೆ
ಹವಾನಿಯಂತ್ರಿತ ಕೋಚ್ ಗಳಲ್ಲಿ ಪ್ರಯಾಣಿಸುವವರ ಹಿತದೃಷ್ಟಿಯಿಂದ ಪ್ರತಿದಿನ ಶುಚಿಗೊಳಿಸಲು ಸಾಧ್ಯವಾಗುವ ತೆಳುವಾದ ಹೊಸ ವಿನ್ಯಾಸದ ಹೊದಿಕೆಗಳನ್ನು ಪ್ರಯಾಣಿಕರಿಗೆ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಇನ್ನು 15 ದಿನಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಪ್ರಯಾಣಿಕರಿಗೆ ನೀಡಲಾಗುತ್ತಿರುವ ಹೊದಿಕೆಗಳು ಆರೋಗ್ಯಕರವಲ್ಲವೆಂಬ ಬಗ್ಗೆ ನಿರಂತರ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಮೊದಲು ರೈಲಿನ ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುವವರಿಗೆ ಒದಗಿಸುವ ಹೊದಿಕೆ (ಬ್ಲಾಂಕೆಟ್)ಗಳನ್ನು ಎರಡು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಆರೋಪ ಕೇಳಿಬಂದಿತ್ತು. ಅಲ್ಲದೇ, ಈ ಆರೋಪದ ಬಗ್ಗೆ ಇತ್ತೀಚೆಗೆ ರಾಜ್ಯಸಭೆಯಲ್ಲಿ ಮಾತನಾಡಿದ ರೈಲ್ವೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರು, ಬೆಡ್‍ಶೀಟ್ಸ್ ಮತ್ತು ತಲೆದಿಂಬು ಹೊದಿಕೆ ಗಳನ್ನು ಪ್ರತಿದಿನ ಸ್ವಚ್ಛಗೊಳಿಸಿ ಒದಗಿಸುತ್ತಿದ್ದರೆ, ಬ್ಲಾಂಕೆಟ್ ಗಳನ್ನು ಎರಡು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವುದು ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿತ್ತು. ಇಂತಹ ಕೊಳಕು ಹೊದಿಕೆಗಳನ್ನು ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಯಾವುದೇ ಕಾರಣಕ್ಕೂ ಪೂರೈಸಬಾರದೆಂಬುದು ಕೆಲವರ ಆಗ್ರಹವಾಗಿದೆ.
ಈ ಹಿನ್ನೆಲೆಯಲ್ಲಿ ಚಿಂತನೆ ನಡೆಸಿರುವ ರೈಲ್ವೆ ಇಲಾಖೆ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ತೆಳುವಾದ, ಕಡಿಮೆ ತೂಕದ, ಬೆಚ್ಚನೆಯ ಹೊದಿಕೆಗಳನ್ನು ಹಂತ-ಹಂತವಾಗಿ ಪೂರೈಕೆ ಮಾಡಲು ಮುಂದಾಗಿದೆ. ಇವುಗಳನ್ನು ಪ್ರತಿದಿನ ಶುಚಿಗೊಳಿಸಿ ಪಯಾಣಿಕರಿಗೆ ನೀಡಲು ಅನೂಕೂಲವಾಗಲಿದೆ
Comments