ವರಮಹಾಲಕ್ಷ್ಮಿ ಹಬ್ಬ: ಹೂವು-ಹಣ್ಣುಗಳ ರೇಟು ಕೇಳಿ ಹೆದರಬೇಡಿ!

ಉದ್ಯಾನ ನಗರಿಯ ಮಾರುಕಟ್ಟೆಗಳೀಗ ಜಾತ್ರೆಯ ಸಂಭ್ರಮದಲ್ಲಿರುವಷ್ಟು ಸಿಂಗರಿಸಿಕೊಂಡಿವೆ. ಆಗಸ್ಟ್ 4 ರ ವರಮಹಾಲಕ್ಷ್ಮಿ ಹಬ್ಬಕ್ಕೆ ಮಾರಾಟವಂತೂ ಭರದಿಂದ ಸಾಗುತ್ತಿದೆ. ವ್ಯಾಪಾರಿಗಳಿಗೆ ಆದಾಯ ಗಳಿಸೋಕೆ ಇದೊಂದು ಸೀಸನ್ ಆಗಿರುವುದರಿಂದ ಅವರು ಹೇಳಿದ್ದೇ ರೇಟು.
ಹಬ್ಬ ಅನ್ನೋ ಕಾರಣಕ್ಕೆ ರೇಟು ಎಷ್ಟಾದರೂ ಸರಿ, ಕೊಳ್ಳುವವರಿಗೇನೂ ಕೊರತೆಯಿಲ್ಲ. ಒಟ್ಟಿನಲ್ಲಿ ವ್ಯಾಪಾರಿಗಳಿಗಂತೂ ವರಮಹಾಲಕ್ಷ್ಮಿ ಹಬ್ಬ ಸಾಕ್ಷಾತ್ 'ಲಕ್ಷ್ಮಿ' ಯ ಆಗಮನ ಎಂಬುದಂತೂ ಸುಳ್ಳಲ್ಲ.
ಎಲ್ಲೆಲ್ಲೂ ತೆಂಗಿನ ಕಾಯಿ, ಹೂವು-ಹಣ್ಣುಗಳು, ಬಾಳೆಗಿಡಗಳು, ವೀಳ್ಯದೆಲೆ, ತರಹೇವಾರಿ ಹಣ್ಣು-ತರಕಾರಿ... ಈ ಎಲ್ಲವುಗಳೊಟ್ಟಿಗೆ ಬೆಲೆ ಏರಿಕೆಯಿದ್ದರೂ ಮಾರುಕಟ್ಟೆಯಲ್ಲಿ ಮುಗಿಬಿದ್ದು ಕೊಳ್ಳುವ ಜನರು! ಇದು ಎಲ್ಲ ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ದೃಶ್ಯ.ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದು ಕೆ.ಜಿ.ಕನಕಾಂಬರಕ್ಕೆ 1600 ರೂ. ಹೇಳಲಾಗುತ್ತಿದೆ! ಮಲ್ಲಿಗೆ ಹಾರಕ್ಕೆ ಕನಿಷ್ಠ 300 ರೂ. ನಿಂದ ಗರಿಷ್ಠ 500, 600 ರವರೆಗೂ ಬೆಲೆ ಹೇಳಲಾಗುತ್ತಿದೆ.
ಸೇವಂತಿಗೆ ಹೂವು ಕೆಜಿಗೆ 400 ರೂ, ಗುಲಾಬಿ ಮತ್ತು ಸುಗಂಧರಾಜ ಬಿಡಿ ಹೂವು ಕೆಜಿಗೆ 200-250, ತಾವರೆ ಹೂವು ಜೋಡಿಗೆ 50-75 ರೂ., ಕನಕಾಂಬರ 1400-1600 ರೂ, ಮಲ್ಲಿಗೆ ಹಾರಕ್ಕೆ 300-500 ರೂ.
ಹಬ್ಬ ಅಂದಮೇಲೆ ಹೂವು ಬೇಕೇ ಬೇಕು. ಬೆಲೆ ಎಷ್ಟಾದರೂ ಸರಿ, ಒಂದು ದಿನಕ್ಕೆ ತಾನೇ? ಎಂದುಕೊಂಡು ಖರೀದಿಸುವವರಿಗೇನು ಕಡಿಮೆಯಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ವ್ಯಾಪಾರಿಗಳು ಹೂವುಗಳ ನಿಜವಾದ ಬೆಲೆಗಿಂತ ಮೂರು, ನಾಲ್ಕು ಪಟ್ಟು ಹೆಚ್ಚು ಬೆಲೆ ನಿಗದಿಪಡಿಸುತ್ತಿದ್ದಾರೆ.
Comments