'ವೀರಶೈವ ಲಿಂಗಾಯತ ಧರ್ಮ ಒಗ್ಗಟ್ಟಿನಿಂದ ಹೋರಾಡಲು ಮಠಾಧೀಶರು ನಿರ್ಧಾರ
ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಎಲ್ಲೆಡೆ ಪರ-ವಿರೋಧ ಚರ್ಚೆಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯ ಮಠಾಧೀಶರು ಪ್ರತ್ಯೇಕವಾಗಿ ಸಭೆ ನಡೆಸಿ ಒಗ್ಗಟ್ಟಿನಿಂದ ಹೋರಾಟ ಮಾಡಲು ನಿರ್ಧಾರಕ್ಕೆ ಬಂದಿದ್ದಾರೆ.
ಕೊಪ್ಪಳದಲ್ಲಿ ಗುರುಪೀಠ ಮತ್ತು ವೀರಕ್ತಮಠದ 15ಕ್ಕೂ ಅಧಿಕ ಶ್ರೀಗಳು ಮುಂಡರಗಿಯ ಶ್ರೀ ಅನ್ನದಾನೀಶ್ವರ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ವೀರಶೈವ ಲಿಂಗಾಯತ ಪದದ ಅರ್ಥ ಬೇರೆ ಬೇರೆ ಅಲ್ಲ, ಅವುಗಳ ಮಧ್ಯೆ ಭೇದ ಹುಟ್ಟು ಹಾಕುವುದು ಬೇಡ. ಇನ್ನು ಈಗಾಗಲೇ ವೀರಶೈವ -ಲಿಂಗಾಯತರು ಒಂದೇ ಆಗಿರುವುದರಿಂದ ಲಿಂಗಾಯತ ಸ್ವತಂತ್ರ ಧರ್ಮ ಕಲ್ಪನೆ ಅಪ್ರಸ್ತುತ ಎಂಬ ನಿರ್ಣಯ ಕೈಗೊಂಡಿದ್ದಾರೆ.
ಇನ್ನು ಸ್ವತಂತ್ರ ಧರ್ಮ ಬೇಡಿಕೆಯನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಬೆಂಬಲಿಸಿದ್ದು, ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಆ.2 ರಂದು ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರೆದಿರುವ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಹೇಳಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವೆಂದು ಮಾನ್ಯತೆ ಪಡೆಯಲೇಬೇಕು ವೀರಶೈವ ಲಿಂಗಾಯತದ ಎಲ್ಲಾ ಧರ್ಮಗುರುಗಳು ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ಹೋರಾಡಿದರೆ ಜಯ ನಿಶ್ಚಿತ ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
Comments