ಭಾರತ-ಚೀನಾ ಗಡಿ ವಿವಾದ ಕುರಿತು ಸಭೆ: ಮಾಜಿ ಪ್ರಧಾನಿ ದೇವೇಗೌಡರಿಗೆ ಪ್ರಧಾನಿ ಮೋದಿಯಿಂದ ಆಹ್ವಾನ
ಬೆಂಗಳೂರು : ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಹ್ವಾನದ ಮೇರೆಗೆ ಶನಿವಾರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ಸಚಿವೆ ಸುಷ್ಮಾ ಸ್ವರಾಜ್ ಅವರು ದೇವೇಗೌಡರಿಗೆ ದೂರವಾಣಿ ಕರೆ ಮಾಡಿ, ಆಹ್ವಾನ ನೀಡಿದ್ದಾರೆ.
ಚೀನಾ ಮತ್ತು ಭಾರತದ ಮಧ್ಯೆ ದೋಕ್ ಲಾ ಗಡಿ ವಿವಾದ ಉಲ್ಬಣಿಸಿದ ಕಾರಣ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಸಲಹೆಯ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ಬಗ್ಗೆ ನವದೆಹಲಿಯಲ್ಲಿ ಶನಿವಾರ ಸಂಜೆ ನಡೆಯುವ ಸಭೆಗೆ ಹಾಜರಾಗಬೇಕು ಎಂದು ಸುಷ್ಮಾ ಸ್ವರಾಜ್ ಮನವಿ ಮಾಡಿದ್ದಾಗಿ ವರದಿಯಾಗಿದೆ.
ಇದೇ ಸಂದರ್ಭದಲ್ಲಿ ದೇವೇಗೌಡರ ಆರೋಗ್ಯದ ಬಗ್ಗೆ ಸ್ವರಾಜ್ ವಿಚಾರಿಸಿದರು ಎಂದು ಕೂಡ ತಿಳಿದುಬಂದಿದೆ. ಶನಿವಾರ ಸಂಜೆ ಐದು ಮೂವತ್ತಕ್ಕೆ ದೆಹಲಿಯ ಜವಾಹರ ಭವನದಲ್ಲಿ ಸಭೆ ನಡೆಯಲಿದ್ದು, ಅದರಲ್ಲಿ ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ಭಾಗವಹಿಸಲಿದ್ದಾರೆ. ಚೀನಾ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಈ ವಿಚಾರವಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.
Comments