ಆಸ್ಟ್ರೇಲಿಯಾದ ಅತಿ ಎತ್ತರದ ಪರ್ವತ ಏರಿದ ಕನ್ನಡತಿ
ಇದೇ ಮೊದಲ ಬಾರಿಗೆ ಕರ್ನಾಟಕದ ಯುವತಿಯೊಬ್ಬರು ಆಸ್ಟ್ರೇಲಿಯಾ ಖಂಡದ ಅತಿ ಎತ್ತರದ ಪರ್ವತ 'ಕಾರ್ಸ್'ಟೆನ್ಜ್ ಪಿರಮಿಡ್' ಏರುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 17800 ಅಡಿ ಎತ್ತರದ, ಕಡಿದಾದ ಬಂಡೆಗಳಿಂದ ಕೂಡಿರುವ ಆಸ್ಟ್ರೇಲಿಯಾದ 'ಕಾರ್ಸ್ ಟೆನ್ಜ್ ಪಿರಮಿಡ್' ಏರಿದ ಮೊದಲ ಮಹಿಳೆಯಾಗಿ ರಾಜ್ಯದ ನಂದಿತಾ ನಾಡಗೌಡರ್ ದಾಖಲೆ ಮಾಡಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂದಿತಾ, 'ಕಾರ್ಸ್'ಟೆನ್ಜ್ ಪಿರಮಿಡ್' ಬಹಳ ಕಷ್ಟಕರವಾದ ಪರ್ವತವಾಗಿದ್ದು, ದುರ್ಗಮ ಹಾದಿಯಿಂದ ಕೂಡಿದೆ. ವಿಭಿನ್ನ ವಾತಾವರಣ, ಮೈನಸ್ 5ರಿಂದ ಮೈನಸ್ 10 ಡಿಗ್ರಿ ತಾಪಮಾನ ಹೊಂದಿರುವ ಪರ್ವತವಾಗಿದೆ. ಪರ್ವತದ ದಕ್ಷಿಣ ಧೃವ ಮುಟ್ಟಿದ್ದು, ತುಂಬಾ ಸಂತಸದ ಕ್ಷಣ. ಆದರೆ ಪ್ರತಿ ಹೆಜ್ಜೆಯೂ ಸಾವಿನ ಅಂಚಿನ ಹಾದಿಯಾಗಿತ್ತು. ರೋಪ್'ವೇನಲ್ಲಿ ನಡೆಯುವಾಗ ದೈಹಿಕ ಸಾಮರ್ಥ್ಯಕ್ಕಿಂತ ಮಾನಸಿಕವಾಗಿ ಹೆಚ್ಚು ಶಕ್ತಿಯುತವಾಗಿರಬೇಕು. ಸತತ 25 ದಿನಗಳ ನಡೆ ತುಂಬ ಕಷ್ಟಕರವಾಗಿತ್ತು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಳೆದ ವರ್ಷ ಹಿಮಾಲಯ ಪರ್ವತ ಏರಿದ್ದೆ, ಈ ಬಾರಿ ಆಸ್ಟ್ರೇಲಿಯಾ ಪರ್ವತದ ದಕ್ಷಿಣ ಧೃವದ ತುದಿ ಮುಟ್ಟಿದ್ದೇನೆ. ಮುಂದಿನ ವರ್ಷ ಅಂಟಾರ್ಟಿಕಾ ಖಂಡದ ಪರ್ವತ ಏರುವ ಗುರಿ ಹೊಂದಿದ್ದೇನೆ. ತಾವು ಹಾಗೂ ಪಶ್ಚಿಮ ಬಂಗಾಳದಿಂದ ಸತ್ಯರೂಪ್ ಸಿದ್ಧಾಂತ್ ಭಾರತವನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಹೇಳಿದರು.
Comments